

ಆನೇಕಲ್: ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸರ್ಕಾರದ ಧೋರಣೆ ಖಂಡಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಶುಕ್ರವಾರ ಕರ್ನಾಟಕ ಗಡಿಭಾಗದ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಹೋರಾಟ ಹತ್ತಿಕ್ಕಲು ಯಾವ ಮುಖ್ಯಮಂತ್ರಿಯೂ ಇದುವರೆಗೆ ಯತ್ನಿಸಿರಲಿಲ್ಲ. ನಾವು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡಿಯೇ ಸಿದ್ಧ. ಪ್ರಾಧಿಕಾರ ಹಿಂಪಡೆಯದಿದ್ದರೆ ಬಂದ್ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಮಾತನಾಡಿ, ಮರಾಠಿಗರು ಪ್ರಾಧಿಕಾರ ಕೇಳದಿದ್ದರೂ ಪ್ರಾಧಿಕಾರ ರಚನೆ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ದೂರಿದರು.
ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮಾತನಾಡಿ, ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಆದೇಶ ಹಿಂಪಡೆದು ಕೂಡಲೇ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಕಾರ‌್ಯಕರ್ತರು ಗಡಿಯಾಚೆಗೆ ಹೋಗಲು ಯತ್ನಿಸಿದಾಗ ಪೊಲೀಸರು ಹೋರಾಟಗಾರರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಕಜಾವೇ ರಾಜ್ಯ ಘಟಕದ ಉಪಾಧ್ಯಕ್ಷ ಜೆ.ಮಂಜೇಗೌಡ, ಯುವ ಘಟಕದ ರಾಜ್ಯ ಅಧ್ಯಕ್ಷ ಎಸ್.ಕೆ.ಗೌರೀಶ್, ರಾಜ್ಯ ಕಾರ್ಯದರ್ಶಿ ಕೋದಂಡಮೂರ್ತಿ, ಜಯಕರ್ನಾಟಕ ಸಂಘಟನೆ ಆನೇಕಲ್ ತಾಲೂಕು ಘಟಕದ ಅದ್ಯಕ್ಷ ಕಿರಣ್ ಕುಮಾರರೆಡ್ಡಿ, ಕಜಾವೇ ಜಿಲ್ಲಾ ಅಧ್ಯಕ್ಷ ಕೆ.ನಾಗರಾಜ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ ರೆಡ್ಡಿ, ಆನೇಕಲ್ ತಾಲೂಕು ಯುವ ಘಟಕದ ಅಧ್ಯಕ್ಷ ಆರ್.ಮಧುಕುಮಾರ್, ಆನೇಕಲ್ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಆರ್.ಸತೀಶ್ ರಾಜ್, ವಿದ್ಯಾರ್ಥಿ ಘಟಕದ ತಾಲೂಕು ಕಾರ್ಯದರ್ಶಿ ಎಂ.ಮಹಾನ್ ಇದ್ದರು.