

ಬೆಂಗಳೂರು: ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದರು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್’ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ.
ನಿಷೇಧಾಜ್ಞೆ ನಡುವೆಯೂ ಶುಕ್ರವಾರ ನಡೆದ ‘ಕರ್ನಾಟಕ ಬಂದ್’ಗೆ ನಗರದಲ್ಲಿ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಕಾವೇರಿ ಹೋರಾಟದ ಕಿಚ್ಚಿಗೆ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡು ರಾಜಧಾನಿ ಸ್ತಬ್ಧವಾಗಿತ್ತು.
ನಗರದಲ್ಲಿ ಬೆಳಗ್ಗೆಯಿಂದಲೇ ಬಂದ್‌ಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ, ಓಲಾ, ಊಬರ್ ಸಂಚಾರ ವಿರಳವಾಗಿತ್ತು. ಸದಾ ಜನ ಸಂದಣಿಯಿಂದ ಕೂಡಿರುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ, ಶಾಂತಿನಗರ ಬಸ್ ನಿಲ್ದಾಣ ಮತ್ತಿತರ ಕಡೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ನಮ್ಮ ಮೆಟ್ರೋದಲ್ಲಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
ಪ್ರತಿಭಟನಾಕಾರರ ವಶಕ್ಕೆ ಪಡೆದ ಖಾಕಿ:
ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ನಗರದ ಮೇಖ್ರಿ ಸರ್ಕಲ್‌ನಿಂದ ಫ್ರೀಡಂಪಾರ್ಕ್‌ವರೆಗೂ ಮತ್ತು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಪ್ರತಿಭಟನಾಕರರನ್ನು ವಶಕ್ಕೆ ಪಡೆಯುವ ಮೂಲಕ ಅವರ ಯೋಜನೆಯನ್ನು ಖಾಕಿ ವಿಲಗೊಳಿಸಿತು. ಬೆಳಗ್ಗೆ ೧೦.೧೫ ರ ಸುಮಾರಿಗೆ ಆರ್.ಟಿ.ನಗರದ ಖಾಸಗಿ ಹೋಟೆಲ್‌ನಿಂದ ಹೊರಬರುತ್ತಿದಂತೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಮತ್ತೊಂದೆಡೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ವೇಳೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಶಿವರಾಮೇಗೌಡ ಮತ್ತು ಕಾರ್ಯಕರ್ತರನ್ನು ಟೌನ್‌ಹಾಲ್ ಬಳಿಯೇ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದು ಫ್ರೀಡಂಪಾರ್ಕ್‌ಗೆ ಬಿಟ್ಟರು. ಕಾರ್ಯಕರ್ತರನ್ನು ಕರೆದೊಯ್ಯುವ ವೇಳೆ ಬಿಬಿಎಂಟಿಸಿ ಬಸ್‌ನ ಕಿಟಕಿಯ ಗಾಜುಗಳು ಪುಡಿಯಾದವು.
೨ ಸಾವಿರ ಜನ ಜಮಾವಣೆ:
ನಗರದ ಫ್ರೀಂಡಂ ಪಾರ್ಕ್‌ನಲ್ಲಿ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಕಾರ್ಯಕರ್ತರು ಸೇರಿ ಸುಮಾರು ೨ ಸಾವಿರದಷ್ಟು ಜನರು ಜಮಾಯಿಸಿ ಸರ್ಕಾರದ ವಿರುದ್ಧ ೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ಸ್ಟಾೃಲಿನ್ ಅವರ ಪ್ರತಿಕೃತಿ ದಹನ,ಅಣಕು ಶವಯಾತ್ರೆ, ಬೈಕ್ ರ‌್ಯಾಲಿ, ಬಾರುಕೋಲು ಚಳವಳಿ, ಖಾಲಿ ಬಿಂದಿಗೆಗಳ ಪ್ರದರ್ಶನ, ಅರೆಬೆತ್ತಲೆ ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಂಘಟನೆಗಳ ಮುಖಂಡರು ಫ್ರೀಡಂ ಪಾರ್ಕ್‌ನಲ್ಲಿ ಕಾವೇರಿ ಹೋರಾಟದ ರಣಕಹಳೆ ಮೊಳಗಿಸಿದರು.
ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಯತ್ನ
ಪ್ರಯಾಣಿಕರ ಸೋಗಿನಲ್ಲಿ ಕೆಐಎಎಲ್ ಆವರಣ ಪ್ರವೇಶಿಸಿ ಪ್ರತಿಭಟನೆ ಮಾಡಲು ಮುಂದಾದ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಐದು ಮಂದಿ ಬೆಳಗ್ಗೆ ೯.೫೦ಕ್ಕೆ ನಿರ್ಗಮಿಸಬೇಕಿದ್ದ ಇಂಡಿಗೋ ವಿಮಾನದ ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಹಿಡಿದು ಪ್ರಯಾಣಿಕರಂತೆ ಕೆಐಎಎಲ್ ಆವರಣ ಪ್ರವೇಶಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಪೊಲೀಸರು ಕೊನೆ ಕ್ಷಣದಲ್ಲಿ ಇವರನ್ನು ಬಂಧಿಸಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕಾರ್ಯಕರ್ತರು ಕನ್ನಡ ಬಾವುಟ ಹಿಡಿದು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಮಾನನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ಮಾಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.
ಸಿಎಂ ಗೃಹ ಕಚೇರಿ ಕೃಷ್ಣಗೆ ಬಿಗಿ ಭದ್ರತೆ
ಕಾವೇರಿ ಕಿಚ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಹಾಗೂ ರೈತಪರ ಸಂಘಟನೆಯ ಕಾರ್ಯಕರ್ತರು ಮುಖ್ಯಮಂತ್ರಿ ಕಚೇರಿ ಹಾಗೂ ನಿವಾಸದ ಎದುರು ಪ್ರತಿಭಟನೆ ನಡೆಸಬಹುದೆಂದು ಅರಿತು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ನಾಲ್ಕಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಹಾಗೂ ಪೊಲೀಸ್ ವಾಹನಗಳನ್ನು ಮುಖ್ಯಮಂತ್ರಿ ಮನೆ ಎದುರು ಕಾಯ್ದಿರಿಸಲಾಗಿತ್ತು. ಅನಿರೀಕ್ಷಿತವಾಗಿ ನುಗ್ಗುವ ಕಾರ್ಯಕರ್ತರನ್ನು ನಿರ್ಬಂಧಿಸಲು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಕ್ರಮವಹಿಸಲಾಗಿತ್ತು.
ಬಿಕೋ ಎನ್ನುತ್ತಿದ್ದ ರಸ್ತೆಗಳು:
ಬಂದ್‌ನ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ಶಾಪಿಂಗ್ ಮಾಲ್ಗಳು, ಚಿನ್ನಾಭರಣ ಮಳಿಗೆಗಳು, ಚಿತ್ರಮಂದಿರಗಳು ಇಡೀ ದಿನ ಮುಚ್ಚಿದ್ದವು. ಸದಾ ವಾಹನಗಳಿಂದ ತುಂಬಿ ತುಳುಕುತ್ತಿದ್ದ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟು ಇದದ್ದು ಕಂಡು ಬಂದಿತು. ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಜಯನಗರ, ಶಿವಾಜಿನಗರ, ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆ ಸೇರಿ ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿರಳವಾಗಿರುವುದು ಕಂಡು ಬಂತು.
ಯಶವಂತಪುರದ ಎಪಿಎಂಸಿ ಮಾರುಕಟ್ಟೆ, ಕಲಾಸಿಪಾಳ್ಯದ ತರಕಾರಿ, ಸಗಟು ಮಾರುಕಟ್ಟೆ, ಹಾಪ್‌ಕಾಮ್ಸ್ ಮಳಿಗೆಗಳೂ ಸೇರಿ ಹೂವು, ಹಣ್ಣಿನ ಮಾರುಕಟ್ಟೆಗಳಲ್ಲಿ ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ವಹಿವಾಟು ನಡೆದರೂ ಜನರು ಮಾರುಕಟ್ಟೆಗಳತ್ತ ಸುಳಿಯಲಿಲ್ಲ. ರೈತರು ದಿನನಿತ್ಯದಂತೆ ಕೆ.ಆರ್.ಮಾರುಕಟ್ಟೆಗೆ ಹೂವು ತಂದಿದ್ದರು. ಆದರೆ, ವ್ಯಾಪಾರ ಎಂದಿನಂತೆ ಇರಲಿಲ್ಲ. ಹೆಚ್ಚಿನ ಗ್ರಾಹಕರು ಮಾರುಕಟ್ಟೆಗೆ ಬಾರದ ಕಾರಣ ವ್ಯಾಪಾರವಿಲ್ಲದೆ ರೈತರು ಹೂವುಗಳನ್ನು ರಸ್ತೆಗೆ ಸುರಿದರು. ಕೆಲ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿದರು.