ಕರ್ನಾಟಕ ಬಂದ್: ಸಾಲು ಸಾಲು ಪ್ರತಿಭಟನೆಗಳ ಅಬ್ಬರ

Karnataka Bandh:
Published on

ಮೈಸೂರು; ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾಲು ಸಾಲು ಪ್ರತಿಭಟನೆಗಳು, ಮೆರವಣಿಗೆಗಳು ಮತ್ತು ಧರಣಿಗಳಿಗೆ ಮೈಸೂರು ಶುಕ್ರವಾರ ಸಾಕ್ಷಿಯಾಯಿತು.
ನೆಲ-ಜಲ, ಗಡಿ-ನುಡಿ ಕುರಿತ ಸಮಸ್ಯೆಗಳಿಗೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಮಾತ್ರ ಬಿದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದವು. ಆದರೆ, ಶುಕ್ರವಾರದ ಬಂದ್‌ನಲ್ಲಿ ವಿವಿಧ ವರ್ಗಗಳ ಸಂಘಟನೆಗಳು ಪಾಲ್ಗೊಂಡಿದ್ದವು. ವಿದ್ಯಾವಂತ ಯುವ ಸಮೂಹ ರಸ್ತೆಗಿಳಿದಿದ್ದರು. ಅವರೆಲ್ಲ ನಗರದ ವಿವಿಧ ಭಾಗದಲ್ಲಿ ಬಿಡಿಬಿಡಿಯಾಗಿ ಬೈಕ್ ರ‌್ಯಾಲಿ ನಡೆಸಿ ಬಂದ್‌ಗೆ ಜೈ ಎಂದರು.


ಬೆಳಗ್ಗೆ 7ರ ಹೊತ್ತಿಗೆ ಗ್ರಾಮಾಂತರ ಬಸ್ ನಿಲ್ದಾಣದ ಎದುರು ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ಶುರು ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ, ದಸಂಸ, ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಒಟ್ಟಾಗಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಅಲ್ಲಿಂದ ಚದುರಿದ ಸಂಘಟನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಿಕ್ಕಗಡಿಯಾರ, ದೊಡ್ಡಗಡಿಯಾರ, ಗಾಂಧಿವೃತ್ತ, ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಸರಣಿ ಪ್ರತಿಭಟನೆಗಳು ನಡೆಸಿದವು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಪ್ರತ್ಯೇಕವಾಗಿ ಬೈಕ್ ರ‌್ಯಾಲಿ ಮಾಡಿದರು. ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಸಯ್ಯಜಿರಾವ್ ರಸ್ತೆ, ಅಶೋಕ್ ರಸ್ತೆಗಳಲ್ಲಿ ಸಾಲು ಸಾಲು ಮೆರವಣಿಗೆಗಳೂ ಜರುಗಿದವು.


ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಡೆ ಬೈಕ್ ರ‌್ಯಾಲಿ ನಡೆಸಿ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದರು.

ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ:


ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ 101 ಪ್ರದಕ್ಷಿಣೆ ಮಾಡುವ ಮೂಲಕ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲಾಯಿತು.


‘ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ’ ಎಂದು ವಿಘ್ನನಿವಾರಕ ವಿಘ್ನೇಶ್ವರನಲ್ಲಿ ಸಾಮೂಹಿಕ ನಮಸ್ಕಾರ ಮಾಡಿ ವಿಶೇಷವಾಗಿ ಪ್ರತಿಭಟಿಸಲಾಯಿತು.
ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ಸಮಸ್ಯೆ ನಿವಾರಿಸಲಿ, ಕಾವೇರಿ ನ್ಯಾಯಾಧೀಕರಣ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ, ವರುಣ ಕೃಪೆ ತೋರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.


ಪಾಲಿಕೆ ಸದಸ್ಯ ಮಾ.ವಿ.ರಾಮ್‌ಪ್ರಸಾದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಂದೀಶ್ ನಾಯಕ್, ಅಪೂರ್ವ ಸುರೇಶ್, ಮೋಹನ್ ಕುಮಾರ್ ಗೌಡ ಇನ್ನಿತರರಿದ್ದರು.


ಹೋಟೆಲ್ ಮಾಲೀಕರಿಂದ ಮನವಿ ಸಲ್ಲಿಕೆ:


ಜಿಲ್ಲಾ ಹೋಟೆಲ್ ಮಾಲೀಕರ ಸಂಘದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಅಲ್ಲಿಂದ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಲಿದೆ. ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಪದಾಧಿಕಾರಿಗಳಾದ ಎನ್.ಎಸ್.ಗೋಪಾಲ್‌ಕೃಷ್ಣ, ಸಿ.ಅನಿಲ್‌ಕುಮಾರ್, ಭಾಸ್ಕರ್ ಶೆಟ್ಟಿ, ರವಿಶಾಸ್ತ್ರಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net