ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್, ಹೇಗಿತ್ತು ಗೊತ್ತಾ ಗುಮ್ಮಟ ನಗರಿ?

KARNATAKA BAND
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು. ಮಹೇಶ ನಾಯಕ, ಪಿಂಟು ಗಬ್ಬೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಅಲ್ಲಲ್ಲಿ ಪ್ರತಿಭಟನೆ, ಹೆದ್ದಾರಿ ತಡೆ, ಸುಂಕದ ಕಟ್ಟೆಗಳ ಬಳಿ ಆಕ್ರೋಶ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮತ್ತಿತರ ಪ್ರತಿರೋಧಗಳಲ್ಲಿಯೇ ‘ಕರ್ನಾಟಕ ಬಂದ್’ ಪರಿಸಮಾಪ್ತಿಗೊಂಡಿತು !

ಹೌದು, ಶುಕ್ರವಾರ ರಾಜ್ಯಾದ್ಯಂತ ಕರೆ ನೀಡಲಾಗಿದ್ದ ‘ಕರ್ನಾಟಕ ಬಂದ್ ಕರೆ’ಗೆ ಐತಿಹಾಸಿಕ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಪ್ರತಿಭಟನೆ, ಮನವಿಗೆ ಮಾತ್ರ ಸೀಮಿತಗೊಂಡಿತು. ಕನ್ನಡಪರ ಸಂಘಟನೆಗಳು, ರೈತ ಸಂಘಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದು ಬಿಟ್ಟರೆ ಬಂದ್‌ನ ಪರಿಣಾಮ ಸಾರ್ವಜನಿಕರಿಗೇನೂ ತಟ್ಟಲಿಲ್ಲ.

ಬೆಳಗ್ಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ಆರಂಭಗೊಂಡವು. ಸಾರಿಗೆ ಬಸ್‌ಗಳು ರಸ್ತೆಗಿಳಿದವು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಬ್ಯಾಗ್ ಹೆಗಲಿಗೇರಿಸಿಕೊಂಡು ಹೆಜ್ಜೆ ಹಾಕಿದರು, ಬಾರ್, ರೆಸ್ಟೋರೆಂಟ್, ಕಿರಾಣಿ, ಕಾಯಿಪಲ್ಲೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿ ಶುಕ್ರವಾರ ಕೆಲವು ಕಾಯಿಪಲ್ಲೆ ಮಾರುಕಟ್ಟೆಗಳು ಸ್ಥಗಿತಗೊಳ್ಳುವುದು ಸಂಪ್ರದಾಯ. ಹೀಗಾಗಿ ಕೆಲವು ಕಾಯಿಪಲ್ಲೆ ಮಾರುಕಟ್ಟೆಗಳು ಸಾಂಪ್ರದಾಯಿಕವಾಗಿ ಸ್ಥಗಿತಗೊಂಡರೆ ಇನ್ನೂ ಕೆಲವರು ಸ್ವಯಂ ಪ್ರೇರಿತವಾಗಿಯೂ ಬಂದ್‌ಗೊಳಿಸಿದ್ದು ಕಂಡು ಬಂತು. ಹಾಗಂತ ಕಾಯಿಪಲ್ಲೆ ಖರೀದಿಗೆ ತೊಂದರೆಯೇನೂ ಉಂಟಾಗಲಿಲ್ಲ.

ಸರ್ಕಾರಿ ಕಚೇರಿಗಳು ಎಂದಿನಂತೆ ಸಾರ್ವಜನಿಕ ಸೇವೆಗೆ ಮುಕ್ತವಾಗಿದ್ದವು. ಆಟೊಗಳು, ಟಂಟಂಗಳು, ಖಾಸಗಿ ಬಸ್‌ಗಳು ನಿರಾತಂಕವಾಗಿ ಸಂಚರಿಸಿದವು. ಮುಂಜಾಗೃತ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತಾದರೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ.

ಜಯ ಕರ್ನಾಟಕ ಸಂಘಟನೆ ಹೋರಾಟ

ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಕಚೇರಿ ಎದುರು ತಲೆ ಮೇಲೆ ಕಲ್ಲು ಹೊತ್ತು ಕೆಲ ಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾಧ್ಯಕ್ಷ ಮಹೇಶ ನಾಯಕ, ಉಪಾಧ್ಯಕ್ಷ ಪಿಂಟು ಗಬ್ಬೂರ, ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ಸಂಘಟನಾ ಕಾರ್ಯದರ್ಶಿ ರಿಯಾಜ ಪಾಂಡು, ಶರಣು ಹೂಗಾರ, ಸಂತೋಷ ಮನಗೂಳಿ, ಶ್ರೀಶೈಲ ಪಾಟೀಲ, ಹುಸೇನಬಾನು ಹತ್ತರಕಿಹಾಳ, ಕವಿತಾ ಅಳ್ಳೊಳ್ಳಿ, ಸಾವಿತ್ರಿ ಖಡಂಕರ, ಬೇಬಿ ತಳವಾರ, ಶಕುಂತಲಾ ಚವ್ಹಾಣ, ಹೊನ್ನಕ್ಕ ಕೋಳಿ, ಸುವರ್ಣ ಹಳ್ಳಿ, ನಾಗಮ್ಮ ವಾಲಿಕಾರ, ನೀಲಮ್ಮ ಬಿರಾದಾರ, ಸುಜಾತಾ ಪೂಜಾರಿ, ಅಶ್ವಿನಿ ಸಾವಂತ, ಮಲ್ಲಮ್ಮಾ ಲಮಾಣಿ, ಮಂಜುನಾಥ ಪತ್ತಾರ, ಭೀಮಣ್ಣ ಯಳಮೇಲಿ, ಶರಣು ಮನಗೂಳಿ, ಕೃಷ್ಣಾ ಚವ್ಹಾಣ, ಉಮೇಶ ರುದ್ರಮಣಿ ಮತ್ತಿತರರಿದ್ದರು.

ಎಕೆಆರ್‌ಎಸ್ ಪ್ರತಿಭಟನೆ

ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ವಿವಿಧ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಹೊನಕೇರಪ್ಪ ತೆಲಗಿ, ಬಸವನ ಬಾಗೇವಾಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ನಾಗರಾಳ, ಸೋಮನಾಥ ಪಾಟೀಲ, ಸುಭಾಸಗೌಡ ಬಿಸಿರೊಟ್ಟಿ, ಬಾಲಚಂದ್ರ ಲಿಂಗದಳ್ಳಿ, ಚನಬಸಪ್ಪ ಸಿಂಧೂರ, ಸಂಗನಗೌಡ ಬಿರಾದಾರ, ಬಸವರಾಜ ಜಂಗಮಶೆಟ್ಟಿ, ಜಯಶ್ರೀ ಜಂಗಮಶೆಟ್ಟಿ, ಬಾಳಪ್ಪ ಬೂದಿಹಾಳ ಮತ್ತಿತರರಿದ್ದರು.

ಹೆದ್ದಾರಿ ತಡೆದು ಆಕ್ರೋಶ

ನಗರದ ಹೊರವಲಯದ ಟೋಲ್ ಬಳಿ ವಿಜಯಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಮುಖಂಡರಾದ ಸೋಮು ಬಿರಾದಾರ, ಶ್ರೀಶೈಲ ವಾಲಿಕಾರ, ಈರಣ್ಣ ಕಲ್ಲೂರು, ಬಾಷಾ ಮನಗೂಳಿ, ಹಣಮಂತ ಬ್ಯಾಡಗಿ, ನಜೀರ ನಂದರಗಿ, ಶಾನೂರ ನಂದರಗಿ, ರೇಖಾ ಪಾಟೀಲ, ವಿಜಯಲಕ್ಷ್ಮಿ ಗಾಯಕವಾಡ, ವಿರೇಶ ಗೊಬ್ಬುರ, ಪ್ರತಾಪ ನಾಗರಗೋಜಿ, ಅರುಣಗೌಡ ತೇರದಾಳ, ಮಹಾದೇವಪ್ಪ ತೇಲಿ, ರಾಮನಗೌಡ ಪಾಟೀಲ, ಕಲ್ಲಪ್ಪಣ್ಣ ಪಾರಶೆಟ್ಟಿ, ಶಫೀಕ ದಫೇದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net