

ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಊರು ತುಂಬ ರ‌್ಯಾಲಿ ನಡೆಸುವ ಮೂಲಕ ಅಂಗಡಿ-ಮುಂಗಟ್ಟು ಮುಚ್ಚಿಸಿದರು. ಗ್ರಾಮಾಂತರ ಬಸ್ ನಿಲ್ದಾಣದ ಬಳಿ ರೈತರು ಜಮಾವಣೆಗೊಂಡರು. ಬಳಿಕ ಬೈಕ್, ಗೂಡ್ಸ್ ಆಟೋ ಇನ್ನಿತರ ವಾಹನ ಏರಿದ ರೈತರು, ಪ್ರಮುಖ ರಸ್ತೆ, ವೃತ್ತ, ಮಾರುಕಟ್ಟೆ, ಜನಪ್ರದೇಶದಲ್ಲಿ ಸಂಚಾರ ಮಾಡಿ ಘೋಷಣೆ ಕೂಗಿದರು. ಅಲ್ಲೊಂದು ಇಲ್ಲೊಂದು ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು. ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಪ್ರೇಮರಾಜ್, ಚಂದ್ರಶೇಖರ್, ಸಾಲುಂಡಿ ಬಸವರಾಜು, ರಾಘವೇಂದ್ರ ಮುದ್ದು ರಾಜು, ಕೃಷ್ಣ, ಕೋಚನಳ್ಳಿ ಮಹೇಶ್ ಹಲವಾರು ಮುಖಂಡರು ಭಾಗವಹಿಸಿದ್ದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರುನಾಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಕರ್ನಾಟಕ ನ್ಯಾಯಪರ ವೇದಿಕೆ, ಕನ್ನಡಾಂಬೆ ರಕ್ಷಣಾ ವೇದಿಕೆ, ಕರ್ನಾಟಕ ಮಲೆಯಾಳಿ ಒಕ್ಕೂಟ, ಮೈಸೂರು ಡಿಸ್ಟ್ರಿಕ್ಟ್ ಫೋಟೊಗ್ರಾಫರ್ಸ್ ಆ್ಯಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಅಗ್ರಹಾರದಲ್ಲಿ ಮೈಸೂರು ಕನ್ನಡ ವೇದಿಕೆ ಸದಸ್ಯರು, ಗಾಂಧಿ ವೃತ್ತದಲ್ಲಿ ಜೈನ ಸಂಘಟನೆ, ಟೀಂ ಮೈಸೂರು ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಯಿತು. ಸಂಘದ ಮುಖಂಡರಾದ ಜಯನಗರ ಮಹೇಶ್, ಚಂದ್ರೇಗೌಡ, ಪ್ರಕಾಶ್, ಮಹದೇವ್, ರುದ್ರಸ್ವಾಮಿ, ಕುಮಾರ್, ಅಬ್ದುಲ್ ರೆಹಮಾನ್, ಮಹೇಶ್ ಮತ್ತು ಸುರೇಶ್ ಇದ್ದರು.
ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ ನಗರ ಬಿಜೆಪಿ ಘಟಕದ ವತಿಯಿಂದ ಬೈಕ್ ರ‌್ಯಾಲಿ ನಡೆಯಿತು. ಬಿಜೆಪಿ ಕಚೇರಿ ಬಳಿ ಸಮಾವೇಶಗೊಂಡ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಮುಖಂಡರಾದ ಬಿ.ಎಂ.ಗಿರಿಧರ್, ಹೇಮಲತಾ ಮುಂತಾದವರು ಭಾಗವಹಿಸಿದ್ದರು.