

ಮಂಡ್ಯ: ಕರ್ನಾಟಕ ಸಂಘ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ವೀರಯೋಧ ದಿವಂಗತ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ವಿದ್ಯಾರ್ಥಿ ಪುರಸ್ಕಾರ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಸೆ.11ರಂದು ಸಂಜೆ 5 ಗಂಟೆಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಹೇಳಿದರು.
ದೊಡ್ಡಗರುಡನಹಳ್ಳಿ ಗ್ರಾಮದ ಜೆ.ರಾಜಶೇಖರಯ್ಯ ಮತ್ತು ನಾಗಮ್ಮ ದಂಪತಿಯ ಏಕೈಕ ಪುತ್ರ ವೀರ ಯೋಧ ಆರ್.ಲೋಕೇಶ್ ಪಟೇಲ್ 2020 ರಲ್ಲಿ ಆಕಸ್ಮಿಕ ಮರಣಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದರು. ಅವರ ನೆನಪಿನಲ್ಲಿ ರಾಜಶೇಖರಯ್ಯ ದಂಪತಿ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಐದನೇ ವರ್ಷದ ಕಾರ್ಯಕ್ರಮ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ.
ಕೆ.ಆರ್.ಪೇಟೆಯ ಪ್ರಗತಿಪರ ರೈತ ಬಿ.ಸಿ.ಪ್ರಸನ್ನ ಅವರಿಗೆ ನಿಂಗಮ್ಮ ಪಟೇಲ ಜೋಗೀಗೌಡ ಕೃಷಿ ಪ್ರಶಸ್ತಿಯನ್ನು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ 25,000 ರೂ ನಗದು ಪುರಸ್ಕಾರದೊಂದಿಗೆ ಪ್ರದಾನ ಮಾಡುವರು. ಐದನೇ ಹಣಕಾಸು ಆಯೋಗದ ಸದಸ್ಯ ಕೆ.ಯಾಲಕ್ಕಿಗೌಡ ವಿದ್ಯಾರ್ಥಿ ಪುರಸ್ಕಾರ ನೀಡುವರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸುವರು ಎಂದರು.
ಟ್ರಸ್ಟ್ ಉಪಾಧ್ಯಕ್ಷೆ ಕಲಾವತಿ, ಕಾರ್ಯದರ್ಶಿ ಜೆ.ರಾಜಶೇಖರಯ್ಯ, ಧರ್ಮದರ್ಶಿ ಬಿ.ಎಸ್.ಸಿದ್ದರಾಜು, ವೆಂಕಟೇಶ್ ಇದ್ದರು.