ಅ.5ರಂದು ಶಾಲಾ ಮಕ್ಕಳಿಂದ ರಂಗಪ್ರಯೋಗ: ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮಾಹಿತಿ

Karnataka association press conference Mandya
Published on

ಮಂಡ್ಯ: ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಅ.5ರಂದು ಶಾಲಾ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗಗಳ ರಂಗಪ್ರಯೋಗ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ಕರ್ನಾಟಕ ಮೂಲಪಾಯ ಯಕ್ಷಗಾನ ಪರಿಷತ್, ಜಿಲ್ಲಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಂಜೆ 4ಕ್ಕೆ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ನಗರದ ಪೊಲೀಸ್ ಕಾಲನಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತ್ರಿಪುರ ಸಂಹಾರ ಹಾಗೂ ಸೂನಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಟಾಯು ಮೋಕ್ಷ ಶೀರ್ಷಿಕೆಯ ಮೂಡಲಪಾಯ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸುವರು. ಪ್ರತಿ ಪ್ರದರ್ಶನ ಒಂದು ಗಂಟೆ ಐದು ನಿಮಿಷ ಇರಲಿದೆ ಎಂದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಮಾರಂಭ ಉದ್ಘಾಟಿಸಲಿದ್ದು, ಕರ್ನಾಟಕ ಜಲಸಾರಿಗೆಯ ಸಿಇಒ ಜಯರಾಂ ರಾಯಪುರ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ ಕಲಾವಿದರಿಗೆ ಪ್ರಮಾಣಪತ್ರ ವಿತರಿಸುವರು. ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಈ.ಗಂಗಾಧರಸ್ವಾಮಿ, ಡಿಡಿಪಿಐ ಎಚ್.ಶಿವರಾಮೇಗೌಡ, ಕೆಪಿಸಿಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ರಾಮನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್ ಭಾಗವಹಿಸುವರು ಎಂದು ವಿವರಿಸಿದರು.

ಮೂಡಲಪಾಯ ಯಕ್ಷಗಾನ ಕರಾವಳಿ ಯಕ್ಷಗಾನಕ್ಕಿಂತಲೂ ಪುರಾತನವಾದುದು. ಒಂದು ಕಾಲಕ್ಕೆ ಮಂಡ್ಯ ಜಿಲ್ಲೆಯಲ್ಲಿ ಮೂಡಲಪಾಯ ಯಕ್ಷಗಾನವು ಉತ್ತುಂಗದಲ್ಲಿತ್ತು. ಆದರೀಗ, ಈ ಕಲೆ ನಶಿಸುವ ಹಂತದಲ್ಲಿದೆ. ಕಲಾವಿದರು, ಭಾಗವತರು, ಮುಖವೀಣೆ ಕಲಾವಿದರು ಸಂಖ್ಯೆ ಬೆರಳೆಣಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಮೂಡಲಪಾಯ ಯಕ್ಷಗಾನವನ್ನು ಮುಂದಿನ ಪೀಳಿಗೆಗೂ ಕೊಡುಗೆಯಾಗುವ ಕೊಡುವ ನಿಟ್ಟಿನಲ್ಲಿ ಕರ್ನಾಟಕ ಸಂಘವು ಶಾಲಾ ಮಕ್ಕಳಿಗೆ ಮೂಡಲಪಾಯ ಯಕ್ಷಗಾನ ಕಲಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ ಮಾತನಾಡಿ, 5ರಂದು ನಡೆಯಲಿರುವ ಮೂಡಲಪಾಯ ಯಕ್ಷಗಾನ ಪ್ರಸಂಗ ಸರ್ವಧರ್ಮ ಸಮನ್ವಯತೆಯನ್ನು ಹೊಂದಿದ್ದು, ಸೌಹಾರ್ದತೆಯ ಪ್ರತೀಕವಾಗಲಿವೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸೂನಗಹಳ್ಳಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಐಲಿನ್ ಸೌಮ್ಯಲತಾ, ಮುಸ್ಲಿಂ ಸಮುದಾಯದ ಮಂಡ್ಯದ ಪೊಲೀಸ್ ಕಾಲನಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಡಾ.ಕೆ.ಶಬಾನ ಅವರು ಹೆಚ್ಚು ಮುತುವರ್ಜಿ ವಹಿಸಿ ಮಕ್ಕಳಿಗೆ ಮೂಡಲಪಾಯ ಯಕ್ಷಗಾನ ಕಲಿಸಿದ್ದಾರೆ ಎಂದರು.

ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಲೋಕೇಶ್ ಚಂದಗಾಲು, ಎಚ್.ಡಿ.ಸೋಮಶೇಖರ್, ಜಿಲ್ಲಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಆಯುಕ್ತ ಡಾ.ಎಚ್.ಪಿ.ಅನಿಲ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net