

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರದ ಅಧಿಕಾರವನ್ನು ಗಟ್ಟಿಗೊಳಿಸಿದ ಉಪಚುನಾವಣೆ ಫಲಿತಾಂಶ ಪ್ರಕಟವಾದ ಎರಡು ತಿಂಗಳ ಬಳಿಕ ಸೋಮವಾರ ಆರಂಭ ಆಗಲಿರುವ ಈ ವರ್ಷದ ಮೊದಲ ಅಧಿವೇಶನ ಕುತೂಹಲ ಕೆರಳಿಸಿದೆ. ಸರ್ಕಾರದ ಮೇಲೆ ಸವಾರಿ ಮಾಡಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನಿಟ್ಟುಕೊಂಡಿರುವ ಕಾಂಗ್ರೆಸ್, ಸರ್ಕಾರವನ್ನು ಕಟ್ಟಿಹಾಕಲು ನಿರ್ಧರಿಸಿದ್ದರೆ, ಮೈತ್ರಿ ಸರ್ಕಾರ ಕೆಡವಿದ ಬಿಜೆಪಿ ವಿರುದ್ಧ ಮುಗಿಬೀಳಲು ಜೆಡಿಎಸ್ ಕೂಡ ಸಿದ್ಧವಾಗಿದೆ.
ಇತ್ತ 10 ‘ಅರ್ಹ’ ಸಚಿವರ ಬಲದೊಂದಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಿಜೆಪಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೂಡುವ ವಿಶ್ವಾಸದಲ್ಲಿದೆ. ಸಂಪ್ರದಾಯದಂತೆ ಸಾಮಾನ್ಯವಾಗಿ ಜನವರಿಯಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನ ನಡೆದು ರಾಜ್ಯಪಾಲರು ಭಾಷಣ ಮಾಡುತ್ತಿದ್ದರು. ಬಳಿಕ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿತ್ತು. ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಆದರೆ ಈ ವರ್ಷದ ಆರಂಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಅಧಿವೇಶನ ತಡವಾಗಿ ಆರಂಭವಾಗುತ್ತಿದ್ದು, ಫೆ.17ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 18, 19, 20ರಂದು ರಾಜ್ಯಪಾಲರ ಭಾಷಣದ ಮೇಲೆ ಎರಡೂ ಸದನಗಳಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆದು ವಂದನಾ ನಿರ್ಣಯ ಅಂಗೀಕರಿಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯಪಾಲರ ಭಾಷಣದ ಅಂಶವನ್ನು ಪ್ರಸ್ತಾಪಿಸುತ್ತಲೇ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ಮಾ.2ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, 5ರಂದು ಬಜೆಟ್ ಮಂಡನೆಯಾಗಲಿದೆ. ಮೊದಲ ಮೂರು ದಿನ ವಿವಿಧ ವಿಧೇಯಕದ ಬಗ್ಗೆ ಚರ್ಚೆ ನಡೆಯುವುದು. ಬಳಿಕ ಮಾ.31ರ ವರೆಗೂ ಕಲಾಪ ನಡೆಯಲಿದೆ. ಈ ದೀರ್ಘಾವಧಿಯಲ್ಲಿ ನಿತ್ಯ ಒಂದೊಂದು ವಿಷಯ ಇಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೈ ನಾಯಕರು ಚರ್ಚೆ ನಡೆಸಿದ್ದಾರೆ. ಪೌರತ್ವ ಕಾಯ್ದೆ ವಿಚಾರ ಮುಂದಿಟ್ಟುಕೊಂಡು ಅಧಿವೇಶನಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿತ್ತಾದರೂ, ಅಧಿವೇಶನಕ್ಕೆ ಅವಕಾಶ ಕೊಡದೇ ಹೋದರೆ ಸಮಾಜಕ್ಕೆ ಬೇರೆ ಸಂದೇಶ ಹೋಗುತ್ತದೆ ಮತ್ತು ಸರ್ಕಾರವೂ ನಿರಾಳವಾಗಿಬಿಡುತ್ತದೆ. ಒಂದು ಅಥವಾ ಎರಡು ದಿನದಲ್ಲಿ ಸರ್ಕಾರವನ್ನು ಟೀಕಿಸುವುದಕ್ಕಿಂತ ಸಿಕ್ಕಿರುವ ಅವಕಾಶ ಬಳಸಿಕೊಂಡು ತಿಂಗಳ ಕಾಲ ನಿರಂತರವಾಗಿ ಮುಗಿಬಿದ್ದು ಜನರ ಗಮನ ಸೆಳೆಯುವ ಬಗ್ಗೆ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರತಿಪಕ್ಷಗಳ ಅಜೆಂಡಾ
1. ಮಂಗಳೂರು ಗೋಲಿಬಾರ್, ದೇಶದ್ರೋಹ ಕೇಸ್ಗಳು, ನಿಷೇಧಾಜ್ಞೆ ಜಾರಿ ಸಂಗತಿ ವಿಚಾರವಾಗಿ ಸರ್ಕಾರಕ್ಕೆ ಚಾಟಿ ಬೀಸುವುದು
2. ನೆರೆ ಸಂತ್ರಸ್ತರಿಗೆ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬ ವಿಷಯ ಮುಂದಿಟ್ಟು ಆಡಳಿತ ಯಂತ್ರವನ್ನು ತಿವಿಯುವುದು
3. ಪೌರತ್ವ ಕಾಯ್ದೆ ವಿರೋಧಿಸಿ ರಾಜ್ಯದಿಂದಲೂ ನಿರ್ಣಯ ಮಂಡಿಸಲು ಆಗ್ರಹಿಸುವುದು
4. ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಪ್ರಕರಣ ಇರುವುದರಿಂದ ಅವರ ರಾಜೀನಾಮೆಗೆ ಪಟ್ಟು ಹಿಡಿಯುವುದು
5. ಶಾಸಕರ ಅನುದಾನ ಕಡಿತ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಯೋಜನೆಗಳ ವರ್ಗಾವಣೆ, ತನಿಖೆ ನೆಪದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸುವುದು
6. ಸರ್ಕಾರದ ಆದಾಯ ಖೋತಾ, ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆರವು ಸಿಗದೇ ಇರುವುದು, ಯೋಜನೆಗಳಿಗೆ ಹಣದ ಕೊರತೆಯಾಗಿರುವುದು