

ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಶನಿವಾರ ತಡ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 56 ವರ್ಷ ವಯಸ್ಸಾಗಿತ್ತು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸವದತ್ತಿ ಮತಕ್ಷೇತ್ರದಿಂದ ಮೂರು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಭಾನುವಾರ ಮಧ್ಯಾಹ್ನ ಸವದತ್ತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆನಂದ್ ಮಾಮನಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆನಂದ್ ಅವರ ತಂದೆ ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ ಕೂಡ ಶಾಸಕರಾಗಿ, ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1966ರ ಜನವರಿ 18ರಂದು ಜನಿಸಿದ್ದ ಆನಂದ್ ಮಾಮನಿ, ಪ್ರಾಥಮಿಕ ಶಿಕ್ಷಣವನ್ನು ಸವದತ್ತಿಯ ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಾಲಾ ಶಿಕ್ಷಣವನ್ನು ಸವದತ್ತಿಯ K.L.E. ಶಾಲೆಯಲ್ಲಿ ಮತ್ತು ಪದವಿ ಶಿಕ್ಷಣವನ್ನು ಸವದತ್ತಿಯ S.V.S. ಬೆಳ್ಳುಬ್ಬಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಬಿ.ಕಾಂ.ವರೆಗೆ ವ್ಯಾಸಂಗ ಮಾಡಿದ್ದರು. ಸಂಗೀತ, ಕೃಷಿ, ಓದು ಅವರ ಹವ್ಯಾಸಗಳಾಗಿದ್ದವು. ಕೃಷಿಕರಾಗಿದ್ದ ಅವರು ರಾಜಕೀಯಕ್ಕೆ ಬರುವ ಮುನ್ನ 1984ರಿಂದ 1999ರವರೆಗೆ ಹತ್ತಿ ವ್ಯಾಪಾರ ಮಾಡುತ್ತಿದ್ದರು. ಪ್ರತಿ ವರ್ಷ 2ರಿಂದ 3.5 ಕೋಟಿ ರೂ. ವ್ಯವಹಾರ ಮಾಡುತ್ತಿದ್ದರು.
ರಾಜಕೀಯ ಜೀವನ:
2008ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಸವದತ್ತಿ ಕ್ಷೇತ್ರದ ಶಾಸಕರಾಗಿ ಆನಂದ್ ಆಯ್ಕೆಯಾದರು. ಮತ್ತೆ 2013ರಲ್ಲಿ ಎರಡನೇ ಬಾರಿಗೆ ಮತ್ತು 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2020ರ ಮಾರ್ಚ್ 23ರಂದು ಕರ್ನಾಟಕ ವಿಧಾನಸಭೆಯ ಉಪ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.
ಇದಕ್ಕೂ ಮುನ್ನ ಆನಂದ ಮಾಮನಿ ಅವರು 2000ರಲ್ಲಿ ಸವದತ್ತಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದರು. ಶ್ರೀ ಕಾಡಸಿದ್ದೇಶ್ವರ ಉಚಿತ ಪ್ರಸಾದ ನಿಲಯದ ಮುಖ್ಯಸ್ಥರಾಗಿದ್ದರು. ಶ್ರೀ ಚಂದ್ರಮ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಪ್ರಾಥಮಿಕ ಸರಕಾರಿ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್ ನೇತೃತ್ವ ವಹಿಸಿದ್ದರು. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು. ಯಲ್ಲಮ್ಮನಗುಡ್ಡ ಮತ್ತು ಶ್ರೀ ರೇಣುಕಾ ಯಲ್ಲಮ್ಮ ಎಜುಕೇಶನ್ ಸೊಸೈಟಿ ಸದಸ್ಯರಾಗಿ ಕೆಲಸ ಮಾಡಿದ್ದರು. ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು.