

ಮೈಸೂರು: ಸರ್ಕಾರ ಕೆಎಸ್‌ಆರ್‌ಟಿಸಿ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ದಿನ ನಿತ್ಯ ಒಂದೊಲ್ಲ ಒಂದು ಬೆಲೆ ಏರಿಕೆ ಮಾಡುತ್ತಲೇ ಇರುವ ಸರ್ಕಾರದ ಕ್ರಮದಿಂದ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇತ್ತೀಚೆಗೆ 20 ರೂ. ಇದ್ದ ಸ್ಟಾೃಂಪ್ ಪೇಪರ್ ಬೆಲೆಯನ್ನು 100 ರೂ.ಗೆ ಏರಿಕೆ ಮಾಡಲಾಗಿದೆ. ನೋಂದಣಿ ದರ, ಆಸ್ತಿ ತೆರಿಗೆ ದರವನ್ನು ಶೇ.30ರಿಂದ 40 ಏರಿಕೆಯಾಗಿದೆ. ವಿದ್ಯುತ್ ದರ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಹಾಲಿನ ದರ, ಜತೆಗೆ ಈಗ ಸಾರಿಗೆ ಬಸ್ ದರವನ್ನು ಶೇ.15ರಷ್ಟು ಏರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕಾಗಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್, ಈಗ ಅವುಗಳನ್ನು ಈಡೇರಿಸಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಶ್ರೀಲಂಕಾ, ದೆಹಲಿಯಲ್ಲಿ ಆದಂತೆ ನಮ್ಮ ರಾಜ್ಯವೂ ಆರ್ಥಿಕ ದಿವಾಳಿಯಾಗಲಿದೆ ಎಂದು ಟೀಕಿಸಿದರು.
ಹಲವಾರು ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳದೆ, ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡದ, ಯಾವುದೇ ಹೊಸ ಯೋಜನೆಗಳನ್ನು ಮಾಡದಂತಹ ಸ್ಥಿತಿಯಲ್ಲಿ ಇದೆ ಎಂದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ ಮುಖಂಡ ಕೃಷ್ಣಪ್ಪ, ಪ್ರಭುಶಂಕರ್, ಹನುಮಂತಯ್ಯ, ಪ್ರಭಾಕರ್, ನೇಹಾ, ಸಿಂಧುವಳ್ಳಿ ಶಿವಕುಮಾರ್, ಭಾಗ್ಯಮ್ಮ, ಡಾ.ಶಾಂತರಾಜೇ ಅರಸ್ ಇತರರು ಇದ್ದರು.