

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಆರಂಭಿಸಲಾಗಿರುವ ಗ್ರಂಥಾಲಯ ಮತ್ತು ಪತ್ರಾಗಾರ ವಿಭಾಗಕ್ಕೆ ಹಿರಿಯರಾದ ಇಂದಿರಾ ದೇವಿ ಪ್ರಸಾದ್ ಶುಕ್ರವಾರ ಚಾಲನೆ ನೀಡಿದರು.
ಕಾಫಿ ಕೃಪ ಕಟ್ಟಡದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ಶುಕ್ರವಾರ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಇಂದಿರಾ ದೇವಿಪ್ರಸಾದ್, ಅರೆಭಾಷೆ ಅಕಾಡೆಮಿ ಪ್ರಥಮ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಅವರು ಸಂಪಾಜೆಯ ಮನೆಯಲ್ಲಿದ್ದ ಅರೆಭಾಷೆ ಹಾಗೂ ಇತರೆ ಸಂಶೋಧನಾ ದಾಖಲೆ ಪುಸ್ತಕಗಳನ್ನು ಅಕಾಡೆಮಿಗೆ ನೀಡುವಂತೆ ತಿಳಿಸಿದ್ದರು. ಅದರಂತೆ ಅಕಾಡೆಮಿಗೆ ೧,೪೦೦ ಅತ್ಯಮೂಲ್ಯ ಪುಸ್ತಕ ಭಂಡಾರವನ್ನು ದಾನವಾಗಿ ನೀಡಲಾಗಿದೆ ಎಂದರು.
ಅಕಾಡೆಮಿಗೆ ನೀಡಲಾಗಿರುವ ಪುಸ್ತಕಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಕಲೆ ಹೀಗೆ ಹಲವು ರೀತಿಯ ಪುಸ್ತಕಗಳು ಇದೆ. ಅರೆಭಾಷೆ ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಮತ್ತಷ್ಟು ಮೇಲೆ ತರಲು ಎಲ್ಲರೂ ಶ್ರಮಿಸಬೇಕು. ಎನ್.ಎಸ್. ದೇವಿ ಪ್ರಸಾದ್ ಸ್ಥಾಪಕ ಅಧ್ಯಕ್ಷರಾಗಿ ಭದ್ರ ಬುನಾದಿ ಹಾಕಿದ್ದಾರೆ. ಹಾಲಿ ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಗ್ರಂಥಾಲಯದಲ್ಲಿ ೨ ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಇದನ್ನು ಸಂಶೋಧಕರು ಬಳಸಿಕೊಳ್ಳಬೇಕೆಂದರು. ಅಕಾಡೆಮಿಯಲ್ಲಿ ಉತ್ತಮ ಗ್ರಂಥಾಲಯ ನಿರ್ಮಿಸಬೇಕೆಂದು ಬಹಳ ಹಿಂದಿನಿಂದಲೂ ಯೋಚಿಸಲಾಗಿತ್ತೆಂದರು.
ಗ್ರಂಥಾಲಯದಲ್ಲಿ ಸಾಮಾನ್ಯ ಪುಸ್ತಕಗಳು, ಪರಾಮರ್ಶನ ವಿಭಾಗ, ಪತ್ರಾಗಾರ ವಿಭಾಗ ಎಂಬ ೩ ವಿಭಾಗ ಮಾಡಲಾಗಿದೆ. ಸಾಮಾನ್ಯ ವಿಭಾಗದಲ್ಲಿ ಜಾನಪದ, ಭೂತಾರಾದನೆ, ಪಾಡ್ದನ, ವಿವಿಧ ಭಾಷೆಗಳ ಚರಿತ್ರೆ, ನಿಘಂಟು ವ್ಯಾಕರಣ, ಯಕ್ಷಗಾನ, ನಾಟಕ, ಕವನ, ಕನ್ನಡ, ಕೊಡವ, ತುಳು, ಅರೆಭಾಷೆಯ ಚರಿತ್ರೆ ಮತ್ತು ವಿವಿಧ ಭಾಗದ ಪುಸ್ತಕಗಳು, ಆತ್ಮಕಥನ, ಪ್ರವಾಸ ಕಥನ, ಅಭಿನಂದನ ಗ್ರಂಥ, ಸಮಗ್ರ ಗ್ರಂಥಗಳು, ದೇಶ ದೇಶದ ಚರಿತ್ರೆ, ಭಾರತ, ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ವಿವಿಧ ಕ್ಷೇತ್ರಗಳ ಪುಸ್ತಕಗಳು ಗ್ರಂಥಾಯದಲ್ಲಿದೆ ಎಂದರು.
ಪರಾಮರ್ಶನ ವಿಭಾಗದಲ್ಲಿ ವಿಶ್ವಕೋಶಗಳು, ಜಾನಪದ ವಿಶ್ವಕೋಶಗಳು, ನಿಘಂಟುಗಳು, ಸಮಗ್ರ ಗ್ರಂಥಗಳು ಮುಂತಾದ ಪುಸ್ತಕಗಳಿವೆ. ಪತ್ರಾಗಾರ ವಿಭಾಗದಲ್ಲಿ ಅಕಾಡೆಮಿ ಪ್ರಕಟಣೆಗಳು, ಅಕಾಡೆಮಿ ಫೆಲೋಶಿಪ್ ನೀಡಿದ ಪ್ರಬಂಧಗಳು, ನೆರಳಚ್ಚು ಮಾಡಿದ ಹಳೆ ಪುಸ್ತಕಗಳು, ಪ್ರಕಟಣೆ ಒಳಗೊಂಡ ಪುಸ್ತಕಗಳ ಮೂಲ ಪ್ರತಿಗಳು, ಸಂಘ ಸಂಸ್ಥೆಗಳ, ಧಾರ್ಮಿಕ ಕ್ಷೇತ್ರಗಳ ಸ್ಮರಣ ಸಂಚಿಕೆಗಳು, ಅಕಾಡೆಮಿ ತ್ರೈಮಾಸಿಕ ಪತ್ರಿಕೆಗಳು, ಫೋಟೋಗಳು, ಸಿ.ಡಿ. ಮುಂತಾದವು ಒಳಗೊಂಡಿದೆ ಎಂದರು.
ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಕೆ.ಸಿ. ದಯಾನಂದ, ಪುರುಷೋತ್ತಮ ಕಿರ್ಲಾಯ, ಕುಸುಮಾಧರ, ಕಿರಣ್ ಕುಂಬಳಚೇರಿ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಮತ್ತಿತರರು ಇದ್ದರು.