

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ನೇತೃತ್ವದ ತಂಡ ಕಳೆದ ೩ ವರ್ಷ ಆಡಳಿತಾವಧಿಯಲ್ಲಿ ಸದಾ ನೆನೆಯುವಂತಹ ಮಹತ್ವದ ಕೆಲಸ ಮಾಡುವುದರ ಮೂಲಕ ಮೆಚ್ಚುಗೆಗೆ ಭಾಜನವಾಗಿದೆ. ಅ.೧೪ ಕ್ಕೆ ಆಡಳಿತಾವಧಿ ಪೂರ್ಣಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಯುವ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಸ್ವಯಂ ಸೇವಕ ಲಕ್ಷ್ಮೀನಾರಾಯಣ ಕಜೆಗದ್ದೆ ಅವರನ್ನು ಅರೆಭಾಷೆ ಅಕಾಡೆಮಿಯ ೩ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ವೇಳೆ ಎಲ್ಲೆಡೆ ಅಚ್ಚರಿ ಮೂಡಿತ್ತು. ಈ ತರುಣ ಏನ್ ಮಾಡುತ್ತಾನೆಂಬ ಪ್ರಶ್ನೆ ಎದ್ದಿತ್ತು. ಆದರೆ, ೩ ವರ್ಷ ಆಡಳಿತಾವಧಿ ಪೂರ್ಣ ಗೊಳ್ಳುವ ವೇಳೆ ತಾವು ಮಾಡಿದ ಕೆಲಸ ಕಾರ್ಯ ಮೂಲಕ ತಮ್ಮ ಆಯ್ಕೆ ಸರಿಯಾಗಿದೆ ಎನ್ನುವ ಉತ್ತರ ನೀಡಿದ್ದಾರೆ.
ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಒಂದು ತಿಂಗಳಲ್ಲಿ ಮಾಡುವ ಕೆಲಸ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದಂತೆ ಅಲ್ಪಾವಧಿ, ಒಂದೆರಡು ವರ್ಷದಲ್ಲಿ ಮಾಡುವ ಕೆಲಸ ಕಾರ್ಯಗಳಿಗೆ ಮಧ್ಯಮಾವಧಿ ಹಾಗೂ ೩ ವರ್ಷದಲ್ಲಿ ಮಾಡುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ್ದಂತೆ ದೀರ್ಘಾವಧಿ ಯೋಜನೆ ರೂಪಿಸಿದ್ದರು.
೩ ಹಂತದ ಕಾರ್ಯ ಯೋಜನೆಯಲ್ಲಿಯೂ ಸಫಲತೆ ಕಂಡಿರುವುದು ಈ ತಂಡದ ವಿಶೇಷತೆ. ಕೋವಿಡ್ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಇವರ ಕಾರ್ಯ ಯೋಜನೆ ಕಾರ್ಯಗತಗೊಳಿಸಲು ಯಾವ ಅಡ್ಡಿಯೂ ಆಗಲಿಲ್ಲ ಎನ್ನುವುದು ವಿಶೇಷ. ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಜವಾಬ್ದಾರಿ ಹಂಚಿಕೆ ಮಾಡುವುದರ ಮೂಲಕ ಬಹಳ ಸೂಕ್ಷ್ಮವಾಗಿ ಹೆಜ್ಜೆಗಳನ್ನಿಟ್ಟಿರುವುದು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಯಶಸ್ಸಿನ ಗುಟ್ಟು.
ರಾಜಕೀಯ- ಜಾತಿ ಸಂಘರ್ಷ, ಮತ್ತೊಬ್ಬರೊಂದಿಗೆ ಪೈಪೋಟಿ ಮಾಡುವ ಗೋಜಿಗೆ ಹೋಗಲಿಲ್ಲ. ತಮ್ಮ ವ್ಯಾಪ್ತಿಯಲ್ಲಿ, ತಮ್ಮ ಅಕಾಡೆಮಿ ಯಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳತ್ತ ಮಾತ್ರ ಚಿತ್ತ ಪರಿಸಿದರು. ಈ ಹಿನ್ನೆಲೆಯಲ್ಲಿ ಯಾವ ವಿವಾದಕ್ಕೂ, ಅಪವಾದಕ್ಕೂ ಲಕ್ಷ್ಮೀನಾರಾಯಣ ಕಜೆಗದ್ದೆ ಒಳಗಾಗಲಿಲ್ಲ.
ದೀರ್ಘಾವಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಪದಕೋಶ, ವಿಶ್ವಕೋಶ, ಪಾರಂಪರಿಕ ವಸ್ತು ಕೋಶ ಅನುಷ್ಠಾನಕ್ಕೆ ತರಲಾಗಿದೆ. ಅರೆಭಾಷೆ ರಂಗಭೂಮಿ ಗೆ ಒತ್ತು ನೀಡುವ ನಿಟ್ಟಿನಲ್ಲಿ ಸಾಹೇಬ್ರು ಬಂದವೆ ನಾಟಕ ೧೭ ಪ್ರದರ್ಶನ ಕಾಣುವುದರ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ೭ ಸಾವಿರ ಕ್ಕಿಂತ ಹೆಚ್ಚಿನ ಪ್ರೇಕ್ಷಕರು ಈ ನಾಟಕ ವೀಕ್ಷಿಸಿದ್ದಾರೆ.
ಅರೆಭಾಷೆ ಯಕ್ಷಗಾನ- ತಾಳಮದ್ದಲೆಯೂ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಅರೆಭಾಷೆ ಸಂಸ್ಕೃತಿಗೆ ಸಂಬಂಧಿಸಿದ್ದಂತೆ ೧೫ ಕಡೆ ಶಿಬಿರ ಆಯೋಜಿಸಿದ್ದು, ೮೦೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಂಗ ತರಬೇತಿ ನೀಡಲಾಯಿತು. ಒಂದು ಪ್ರದರ್ಶನ ಕಂಡ ಈ ನಾಟಕ ಅನುದಾನದ ಕೊರತೆಯಿಂದ ವಿವಿಧೆಡೆ ಪ್ರದರ್ಶನ ಕಾಣಲು ಸಾಧ್ಯ ವಾಗಲಿಲ್ಲ.
ಅರೆಭಾಷೆ ಅಕಾಡೆಮಿ ಪ್ರಾರಂಭವಾದ ಡಿಸೆಂಬರ್ ೧೫ ಅನ್ನು ಅರೆಭಾಷೆ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯದ ೧೮ ಕಡೆ ಏಕ ಕಾಲಕ್ಕೆ ಅರೆಭಾಷೆ ದಿನಾಚರಣೆ ಆಯೋಜಿಸಿರುವುದು ವಿಶೇಷ. ೩ ವರ್ಷದಲ್ಲಿ ೩೦ ಕೃತಿ ಲೋಕಾರ್ಪಣೆ ಮಾಡಲಾಗಿದೆ. ಹೊಸ ತಲೆಮಾರಿನ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಡಿಕೇರಿಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಥೆ, ಲಲಿತಾ ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು.
ದೊಡ್ಡ ಸಾಧನೆ
ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆ ಆಗುವಂತೆ ಮಾಡಿರುವುದು ಅಕಾಡೆಮಿ ದೊಡ್ಡ ಸಾಧನೆ. ಕೊಡವ, ತುಳು, ಬ್ಯಾರಿ ಚಲನಚಿತ್ರಕ್ಕೆ ಸಿಗುವಂತೆ ಅರೆಭಾಷೆ ಚಲನಚಿತ್ರಕ್ಕೂ ಸಬ್ಸಿಡಿ ಸಿಗುವಂತೆ ಮಾಡಲು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.
ಸಾಕ್ಷೃಚಿತ್ರ- ಸಾಧಕರ ಪರಿಚಯ
ಅರೆಭಾಷೆ ಸಮುದಾಯದ ಮಹಾನ್ ವ್ಯಕ್ತಿಗಳು ಹಾಗೂ ಸಾಧಕರ ಕುರಿತು ದಾಖಲೆಯಲ್ಲಿ ಉಳಿಯುವಂತೆ ಮಾಡಲು ಪುಸ್ತಕ ರೂಪದಲ್ಲಿ ದಾಖಲೀಕರಣ ಮಾಡಲಾಗಿದೆ. ಈಗಾಗಲೇ ಗಮನ ಸೆಳೆದಿರುವವರು ಹಾಗೂ ಅಕಾಡೆಮಿಯಿಂದ ಪ್ರಶಸ್ತಿಗೆ ಭಾಜನರಾದವರ ಕುರಿತು ಪುಸ್ತಕ ಹೊರ ತರಲಾಗಿದೆ.
ಡಾ.ಕೋಡಿ ಕುಶಾಲಪ್ಪ ಗೌಡ, ಮೋಹನ್ ಸೋನ, ಎನ್.ಎಸ್. ದೇವಿಪ್ರಸಾದ್ ಹಾಗೂ ಕೊಡಗು ಗೌಡ ವಿದ್ಯಾಸಂಸ್ಥೆ ಬಗ್ಗೆ ಸಾಕ್ಷೃಚಿತ್ರ ತಯಾರಿಸಲಾಗಿದೆ. ಸುಬೇದಾರ್ ಗುಡ್ಡೆಮನೆಯ ಅಪ್ಪಯ್ಯಗೌಡ, ಕೆದಂಬಾಡಿ ರಾಮಯ್ಯಗೌಡ, ಕುರಂಜಿ ವೆಂಕಟರಮಣಗೌಡ, ಕಾವೇರಿಮನೆ ಬೋಜಪ್ಪ ಗೌಡ, ಕೊಳಂಬೆ ಪುಟ್ಟಣ್ಣಗೌಡ ಅವರ ಕುರಿತು ಕೃತಿ ಸಿದ್ದ ಪಡಿಸಲಾಗಿದೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಬಿಲಿಮಲೆ ಕುರಿತು ಕೃತಿ ಸಿದ್ಧ ಪಡಿಸಲಾಗಿದೆ.
ಚಿತ್ರಕಲಾ ಶಿಬಿರ
ನಾಡಿನ ಪ್ರಖ್ಯಾತ ೧೦ ಚಿತ್ರಕಲಾವಿದರನ್ನು ಅರೆಭಾಷಿಕ ಸಮುದಾಯಕ್ಕೆ ಸೇರಿದ ೧೦ ಜನರ ಮನೆಯಲ್ಲಿರಿಸಿ, ಅರೆಭಾಷೆ ಸಂಸ್ಕೃತಿಗೆ ಸಂಬಂಧಿ ಸಿದ್ದಂತೆ ತಲಾ ೨ ಚಿತ್ರ ಬಿಡಿಸುವಂತೆ ಮಾಡುವ ಮಹತ್ವದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಅನ್ಯಕೋಮಿಗೆ ಸೇರಿದ ಚಿತ್ರಕಲಾವಿದ ರಿಗೆ ಅರೆಭಾಷೆ ಸಂಸ್ಕೃತಿ ಪರಿಚಯಿಸುವ ಕೆಲಸವೂ ಆ ಮೂಲಕ ನಡೆಯಿತು.
ಸಾಹಿತ್ಯ ಸಮ್ಮೇಳನ
ಅರೆಭಾಷೆ ಅಕಾಡೆಮಿಯ ಎರಡನೇ ಸಾಹಿತ್ಯ ಸಮ್ಮೇಳನ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಆಲೂರು- ಸಿದ್ದಾಪುರದಲ್ಲಿ ವ್ಯವಸ್ಥಿತ ವಾಗಿ ಆಯೋಜಿಸಲಾಗಿತ್ತು. ೪ ಸಾವಿರಕ್ಕೂ ಹೆಚ್ಚು ಅರೆಭಾಷಿಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಫೆಲೋಶಿಪ್ ವಿವಾದ
ಅಕಾಡೆಮಿ ನೀಡುವ ಫೆಲೋಶಿಪ್‌ಗೆ ಸಂಬಂಧಿಸಿದ್ದಂತೆ ಸುಳ್ಯದ ಹಿಮಕರ ನೇತೃತ್ವದಲ್ಲಿ ಅಧ್ಯಕ್ಷರ ವಿರುದ್ಧ ಆರೋಪ ಮಾಡಲಾಗಿತ್ತು. ಫೆಲೋಶಿಪ್ ವಿಚಾರದಲ್ಲಿ ನಮ್ಮ ತಪ್ಪು ಇರಲಿಲ್ಲ. ಅವರ ಅವಧಿಯಲ್ಲಿ ೧೦ ಜನರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಿದ್ದು, ಒಬ್ಬರಿಗೆ ಮಾತ್ರ ಗೌರವಧನ ನೀಡಲಾಗಿತ್ತು. ತಮ್ಮ ಅವಧಿಯಲ್ಲಿ ಅವರು ಆಯ್ಕೆ ಮಾಡಿದ್ದ ೯ ಜನರಿಗೆ ನಿಗದಿತ ಮೊತ್ತ ನೀಡಲಾಗಿದೆ ಎನ್ನುತ್ತಾರೆ ಲಕ್ಷ್ಮೀನಾರಾಯಣ ಕಜೆಗದ್ದೆ.
**
ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ್ದಾರೆ. ಪ್ರತಿಯೊಬ್ಬ ಸದಸ್ಯರು ತಮ್ಮ ಪಾಲಿನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕಾಡೆಮಿ ಕಾರ್ಯ ಚಟುವಟಿಕೆ ನಡೆದಿದೆ. ಮೂರು ವರ್ಷದ ಆಡಳಿತಾವಧಿ ತೃಪ್ತಿ ತಂದಿದೆ. ಲಕ್ಷ್ಮೀನಾರಾಯಣ ಕಜೆಗದ್ದೆ, ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ.