

ಬಳ್ಳಾರಿ: ಕರ್ನಾಟಕ-ಆಂಧ್ರದ ಗಡಿ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಕೆಗೆ ಮುಂದಾಗಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ, ತುಮಟಿ ಸರಹದ್ದಿನಲ್ಲಿರುವ ಬ್ರಿಟಿಷ್ ಕಾಲದ ಗಡಿಗುರುತು ನಾಶ ಹಾಗೂ ಗಡಿ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಸರ್ವೇ ನಡೆದಿದೆ.
ಈ ಕುರಿತ ಪ್ರಕರಣ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದು, ಕೋರ್ಟ್ ಕೂಡ ನಿಖರ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆ ಆಂಧ್ರ ಮತ್ತು ಕರ್ನಾಟಕದ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳಿಗೆ ಗಡಿ ಸರ್ವೇ ನಡೆಸಿ, ವರದಿ ನೀಡುವಂತೆ ಸೂಚಿಸಿದೆ. ಆದರೆ, ಈವರೆಗೂ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸಿಲ್ಲ. ಈಗ ಆಧುನಿಕ ತಂತ್ರಜ್ಞಾನವುಳ್ಳ ಡ್ರೋನ್ ಬಳಕೆಗೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಮುಂದಾಗಿದ್ದು, ಈಗಾದರೂ ಗಡಿ ಗುರುತು-ಗಡಿ ಒತ್ತುವರಿ ವಿವಾದ ಇತ್ಯರ್ಥವಾಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.