ಕರ್ನಾಟಕ 50ರ ಸಂಭ್ರಮ ರಥಯಾತ್ರೆಗೆ ಸ್ವಾಗತ

HUN-SEP-6-1(KARNATAKA SAMBHRAMA)
????????????????????????????????????
Published on

ಹುಣಸೂರು: ವಿಶಾಲ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವಸಂತಗಳನ್ನು ಪೂರೈಸಿದ ನೆನಪಿಗಾಗಿ ರಾಜ್ಯ ಸರ್ಕಾರ ಚಾಲನೆ ನೀಡಿರುವ ಕರ್ನಾಟಕ-50ರ ಸಂಭ್ರಮ ರಥಯಾತ್ರೆಯನ್ನು ಶುಕ್ರವಾರ ಪಟ್ಟಣದಲ್ಲಿ ಸ್ವಾಗತಿಸಲಾಯಿತು.


ನಗರಸಭೆ ಕಚೇರಿ ಆವರಣದ ಮುಂಭಾಗ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಒಳಗೊಂಡ ರಥಯಾತ್ರೆಗೆ ತಹಸೀಲ್ದಾರ್ ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ನೇತಾರ ದೇವರಾಜ ಅರಸು ನಮ್ಮೂರಿನ ಪುತ್ರ ಎನ್ನುವುದು ಹೆಮ್ಮೆಯ ಸಂಗತಿ ಎಂದರು.


ರಥಯಾತ್ರೆಯಲ್ಲಿ ಡೊಳ್ಳುಕುಣಿತ, ನಗರದ ಕಲ್ಕುಣಿಕೆ ಬಡಾವಣೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಬ್ಯಾಂಡ್‌ಸೆಟ್ ವಾದನ, ಕಲಾತಂಡಗಳು ಪಾಲ್ಗೊಂಡಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಪಿರಿಯಾಪಟ್ಟಣಕ್ಕೆ ಕಳುಹಿಸಿಕೊಡಲಾಯಿತು. ಉಪತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್, ನಗರಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಮೋದೂರು ಮಹೇಶಾರಾದ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹದೇವ್, ಪೌರಾಯುಕ್ತೆ ಮಾನಸಾ, ಮುಖಂಡರಾದ ಜಯರಾಂ, ಪುಟ್ಟರಾಜು, ಶಿವಾನಂದ್ ಇತರರಿದ್ದರು.

ಭಾವಚಿತ್ರ ಅಳವಡಿಸಿ: ರಥದಲ್ಲಿ ಹಾಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಭಾವಚಿತ್ರವಿದೆ. ಆದರೆ, ದೇವರಾಜ ಅರಸು ಅವರ ಭಾವಚಿತ್ರವನ್ನು ಏಕೆ ಅಳವಡಿಸಿಲ್ಲ. ಇದು ನಮ್ಮ ನಾಯಕನಿಗೆ ಮಾಡಿದ ಅಪಮಾನವಲ್ಲವೇ? ದಯವಿಟ್ಟು ಭಾವಚಿತ್ರ ಅಳವಡಿಸಬೇಕೆಂದು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ವಿ.ಪಿ.ಸಾಯಿನಾಥ್ ಆಗ್ರಹಿಸಿದರು. ಇದಕ್ಕೆ ಸಾಕಷ್ಟು ಜನರು ಆಗ್ರಹಿಸಿದರು. ರಥಯಾತ್ರೆಯ ಆಯೋಜನೆ ರಾಜ್ಯ ಸರ್ಕಾರ ಮಾಡಿದ್ದು, ಇದರಲ್ಲಿ ಇನ್ಯಾವುದೇ ಬದಲಾವಣೆ ಅಥವಾ ಅಳವಡಿಸುವ ಅಧಿಕಾರ ನಮಗಿಲ್ಲ. ದಯವಿಟ್ಟು ಸಹಕರಿಸಬೇಕೆಂದು ತಹಸೀಲ್ದಾರ್ ಮಂಜುನಾಥ್ ಕೋರಿದಾಗ ರಥಯಾತ್ರೆ ಮುಂದುವರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net