ಕರ್ನಾಟಕ ಸಂಭ್ರಮ: ಮೆರವಣಿಗೆ ನೋಡುವುದೇ ಚೆಂದ

20231103_192326
Published on

ವಿಜಯವಾಣಿ ಸುದ್ದಿಜಾಲ ಗದಗ

ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ಕನ್ನಡ ಸಂಭ್ರಮ-೫೦ರ ಅಂಗವಾಗಿ ಹಂಪಿಯಿದ ಶುಕ್ರವಾರ ಆಗಮಿಸಿದ ಕನ್ನಡ ಜ್ಯೋತಿಯನ್ನು ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿಯಾಗಿ ಬರಮಾಡಿಕೊಂಡರು.

ಇಲ್ಲಿನ ವೀರನಾರಾಯಣನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಅವರು ಬಳಿಕ ದೇವಸ್ಥಾನದ ಆವರಣದಲ್ಲಿ ನಾಡದೇವತೆ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡ ರಥದ ಮೆರವಣಿಗೆ ಸಂಭ್ರಮ:

ಕನ್ನಡ ರಥದ ಮೆರವಣಿಗೆಯಲ್ಲಿ ಸಹಸ್ರ ಸಹಸ್ರ "ಅರಿಶಿನ-ಕುಂಕಮ" ಬಣ್ಣದ ಬಾವುಟಗಳು, ಕಲಶಗಳು ಮತ್ತು ಕನ್ನಡ ಶಾಲುಗಳನ್ನು ಹೊದ್ದ ಕನ್ನಡ ಕಾರ್ಯಕರ್ತರ ಜಯಘೋಷಗಳ ನಡುವೆ ಸಿಎಂ ಸಿದ್ದರಾಮಯ್ಯ ಮೆರವಣಿಗೆಯಲ್ಲಿ ತೆರಳಿದರು. ಗದಗಿನ ಮುಖ್ಯರಸ್ತೆಗಳಲ್ಲಿ ಸಾಗಿದ ಕನ್ನಡ ರಥವನ್ನು ಕನ್ನಡಿಗರು ಹೂಮಳೆಗರೆದು ಸ್ವಾಗತಿಸಿದರು. ಹಾದಿಯುದ್ದಕ್ಕೂ ಮನೆಗಳ ಮುಂದೆ  ಕನ್ನಡದ ರಂಗೋಲಿ, ಬಾವುಟಗಳು ಕಣ್ಮನ ಸೆಳೆಯುತ್ತಿದ್ದರೆ ಮಹಿಳೆಯರು, ಮಕ್ಕಳು ರಥಕ್ಕೆ ಹೂಮಳೆ ಗರೆಯುತ್ತಾ, ರಥದ ಚಕ್ರಗಳಿಗೆ ಹಣ್ಣು ಕಾಯಿ, ಹಾಲಿನ ಅಭಿಷೇಕ ಮಾಡಿದರು. 

ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ:

"ಕನ್ನಡ ಸಂಭ್ರಮ-50" ಸಂಭ್ರಮದ ಅಂಗವಾಗಿ ನಗರದ ವೀರನಾರಾಯಣನ ದೇವಸ್ಥಾನದಿಂದ ಆರಂಭವವಾದ ಮೆರವಣಿಗೆಯೂ

ನಗರದ ಜಾಮೀಯಾ ಮಸೀದಿ,  ಬಸವೇಶ್ವರ ವೃತ್ತ, ಕೆ.ಎಚ್.ಪಾಟೀಲ ವೃತ್ತ, ಪಂ.ಪುಟ್ಟರಾಜ ಗವಾಯಿಗಳ ವೃತ್ತ ( ಭೂಮರಡ್ಡಿ ವೃತ್ತ), ಜನರಲ್ ಕಾರಿಯಪ್ಪ ವೃತ್ತದ ಮೂಲಕ ದಿ.ಕಾಟನ್ ಸೇಲ್ ಸೊಸೈಟಿಗೆ ತಲುಪಿತು. ಸಾವಿರಾರು ಜನರು ಈ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

೨೫ಕ್ಕೂ ಅಧಿಕ ಕಲಾ ತಂಡಗಳು ಭಾಗಿ:

"ಕನ್ನಡ ಸಂಭ್ರಮ-50" ಸಂಭ್ರಮದ ಅಂಗವಾಗಿ ಮೈಸೂರಿನ ಚಂಡೆ ಮದ್ದಳೆ ಕಲಾತಂಡ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ೨೫ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಕಲಾಪ್ರದರ್ಶನ ನೀಡಿದವು. ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡ ಸಬರಮತಿ ಆಶ್ರಮ, ಲಕ್ಕುಂಡಿಯ ಬ್ರಹ್ಮಜೀನಾಲಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗತವೈಭವ ಸಾರಿದವು. ನಗರಸಭೆ ವತಿಯಿಂದ ಭುವನೇಶ್ವರಿ, ಸರಕಾರದಿಂದ ಅಧಿಕೃತಗೊಳಿಸಲಾದ ಲಾಂಛನ ಹಾಗೂ ಭುನೇಶ್ವರಿ ದೇವಿ ಮೂರ್ತಿ, ಕುಂಭಹೊತ್ತ ಮಹಿಳೆಯರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆಗೆ ರಂಗು ತುಂಬಿದರು.

ಮೆರವಣಿಗೆ ರಂಗು ನೀಡಿದ ನಾಯಕರು:

"ಕನ್ನಡ ಸಂಭ್ರಮ-೫೦" ಸಂಭ್ರಮದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ,  ಶಾಸಕ ಜಿ.ಎಸ್. ಪಾಟೀಲ, ಶ್ರೀನಿವಾಸ ಮಾನೆ, ಜೆ.ಟಿ. ಪಾಟೀಲ, ಸರಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿ ಹಲವರು ಇದ್ದರು.

ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಅಲಂಕಾರ:

ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಪುರಾತನ ವೀರನಾರಾಯಣ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು. ವೀರನಾರಾಯಣನಿಗೆ ವಿಶೇಷ ಪೂಜೆ ಜೊತೆಗೆ ಕುಮಾರವ್ಯಾಸ ಸ್ತಂಭಕ್ಕೂ ಅಲಂಕಾರ ಮಾಡಲಾಗಿತ್ತು. ಸಿಎಂ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಶೇಷ ಭೋಜನ:

 ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕನ್ನಡಾಭಿಮಾನಿಗಳಿಗೆ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ಗದ್ದಲ ಆಗದಂತೆ ಶಿಸ್ತು ಬಂದವಾಗಿ ಊಟದ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಊಟ ಮುಗಿದ ನಂತರ ಕುಡಿಯವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸರಿದಿ ಸಾಲಿನಲ್ಲಿ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸ್ತಬ್ಧ ಚಿತ್ರಗಳೊಂದಿಗೆ ಸೇಲ್ಪಿ:

ಸಂಭ್ರಮದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡ ಸಬರಮತಿ ಆಶ್ರಮ, ಲಕ್ಕುಂಡಿಯ ಬ್ರಹ್ಮಜೀನಾಲಯ ಸ್ತಬ್ಧ ಚಿತ್ರಗಳು ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಸ್ತಬ್ಧ ಚಿತ್ರಗಳೊಂದಿಗೆ ಮಕ್ಕಳು ಹಾಗೂ ಮಹಿಳೆ ಸೇಲ್ಪಿ ಕ್ಲಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net