

ಬದಿಯಡ್ಕ: ತಂಜಾವೂರು ವಾಸ್ತುಶೈಲಿಯ, ಆಳೆತ್ತರದ ಮಹಾವಿಷ್ಣು ಮೂರ್ತಿಯಿಂದ ಕಂಗೊಳಿಸುವ ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯ 32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ ಹಾಗೂ ರಾಜಗೋಪುರಗಳೊಂದಿಗೆ ನವೀಕರಣಗೊಂಡಿದೆ. ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ ತಂತ್ರಿ ಗಣೇಶ ತಂತ್ರಿ ನೇತೃತ್ವದಲ್ಲಿ ಮಾ.1ರಿಂದ 9ರವರೆಗೆ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿರುವುದು. 9 ಗಂಟೆಗೆ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ವಿವಿಧ ಆಕರ್ಷಣೆಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬದಿಯಡ್ಕ, ನೀರ್ಚಾಲು ಪೇಟೆಯಾಗಿ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ. ಸಂಜೆ 4ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 6.30ಕ್ಕೆ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಆಗಮನ, ಪೂರ್ಣಕುಂಭ ಸ್ವಾಗತ, 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ. ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಧಾರ್ಮಿಕ ಸಭೆಯಲ್ಲಿ ಮಧುಸೂದನ್ ಅಯರ್ ಅಧ್ಯಕ್ಷತೆ ವಹಿಸಲಿದ್ದು, ಕೆ.ಕೆ.ಶೆಟ್ಟಿ ಉದ್ಘಾಟಿಸುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು ಎಂದರು.
6ರಂದು ಬೆಳಗ್ಗೆ 108 ಕಾಯಿ ಗಣಪತಿ ಹೋಮ, 7.37ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಹಾಗೂ ಪರಿವಾರ ದೇವತಾ ಪ್ರತಿಷ್ಠಾಪನೆ, ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಸಂಜೆ ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ ನಡೆಯಲಿದೆ. 9ರಂದು ಬೆಳಗ್ಗೆ 6 ಗಂಟೆಯಿಂದ 1008 ಕಲಶಾಬಿಷೇಕ, ಬ್ರಹ್ಮಕಲಶಾಭಿಷೇಕ, ಅವಧೃತ ಪ್ರೋಕ್ಷಣೆ, ಮಂಗಲ ಮಂತ್ರಾಕ್ಷತೆ, ಸಂಜೆ 7ರಿಂದ ಶ್ರೀ ದೇವರ ಉತ್ಸವ ಬಲಿ, 11.30ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. 9ರಂದು ಕಾರ್ಮಾರು ಶ್ರೀ ವಿಷ್ಣುಲೀಲಾ ಮೈದಾನದಲ್ಲಿ ಪ್ರಸಿದ್ಧ ಗಾಯಕರಿಂದ ಮೆಗಾ ಗಾನಮೇಳ ವಿಶೇಷವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಸೇವಾ ಸಮಿತಿ ಅಧ್ಯಕ್ಷ ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ, ಟ್ರಸ್ಟಿಗಳಾದ ಗೋಪಾಲಕೃಷ್ಣ ಭಟ್ ಪಿ.ಎಸ್, ರಾಮ ಕಾರ್ಮಾರು, ಸೇವಾ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಎ.ಎಸ್, ಯುವ ಸಮಿತಿ ಸಂಚಾಲಕ ವಿಜಯಕುಮಾರ್ ಮಾನ್ಯ, ಗ್ರಾ.ಪಂ. ಸದಸ್ಯ ಶಾಮಪ್ರಸಾದ್ ಮಾನ್ಯ, ಮಾನ ಮಾಸ್ತರ್ ಮಾನ್ಯ ಉಪಸ್ಥಿತರಿದ್ದರು.
ವಿವಿಧ ಶ್ರೀಗಳಿಂದ ಆಶೀರ್ವಚನ
ವಿವಿಧ ದಿನ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಮಲಾದೇವಿ ಪ್ರಸಾದ ಆಸ್ರಣ್ಣ ಕಟೀಲು, ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀಮಾತಾನಂದಮಯಿ ಒಡಿಯೂರು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುವರು ಎಂದು ಮಹೇಶ್ ವಳಕ್ಕುಂಜ ತಿಳಿಸಿದರು.
ಮೈಸೂರು ಅರಮನೆಯ ಶ್ರೀ ಯದುವೀರ ಒಡೆಯರ್ ಭಾಗಿ
ಶ್ರೀ ವಿಷ್ಣುಪ್ರಭ ವೇದಿಕೆಯಲ್ಲಿ ಪ್ರತಿದಿನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ನಾಡಿನ ಗಣ್ಯರು ಹಾಗೂ ಯತಿಶ್ರೇಷ್ಠರು ಪಾಲ್ಗೊಳ್ಳಲಿರುವರು. ಸಂಗೀತ, ನೃತ್ಯ, ಯಕ್ಷಗಾನ ಮೊದಲಾದ ಧಾರ್ಮಿಕ ಕಲೆಗಳು ಪ್ರದರ್ಶನಗೊಳ್ಳಲಿದೆ. ಶ್ರೀ ವಿಷ್ಣುಪ್ರಿಯ ಭಜನಾ ಮಂಟಪದಲ್ಲಿ ಪ್ರತಿದಿನ ಬೆಳಗ್ಗೆಯಿಂದ ರಾತ್ರಿ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಗೆ ಪ್ರಥಮ ಬಾರಿಗೆ ಮೈಸೂರು ಅರಮನೆಯ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಶ್ ವಳಕ್ಕುಂಜ ತಿಳಿಸಿದರು.