ಕಾರ್ಲ ಕಜೆ ಪ್ರಮಾಣಪತ್ರ ಶೀಘ್ರ: ಕೃಷಿ ಸಚಿವ ಬಿ.ಸಿ ಪಾಟೀಲ್

kaje new
Published on

ಕಾರ್ಕಳ: ಕಾರ್ಲ ಕಜೆಯ ಕುರಿತು ಡಿಎನ್‌ಎ ಪರೀಕ್ಷೆ, ಸಂಶೋಧನೆ ನಡೆಸಿ ಪ್ರಮಾಣಪತ್ರ ಅತಿ ಶೀಘ್ರದಲ್ಲಿ ದೊರಕಿಸಲು ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸೂಚಿಸಿದರು.

ಕುಕ್ಕುಂದೂರು ಗ್ರಾಮ ಪಂಚಾಯಿತಿ ಮೈದಾನದಲ್ಲಿ ಸೋಮವಾರ ಕಾರ್ಲ ಕಜೆ ಮುದ್ರಾಂಕ ಬಿಡುಗಡೆ ಹಾಗೂ ರೈತರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾರ್ಲ ಕಜೆಯ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತು ರೈತರ ಬ್ರಾಂಡ್ ಬಿಡುಗಡೆಗೆ ಶಾಸಕ ವಿ.ಸುನೀಲ್ ಕುಮಾರ್ ಕಾರಣರಾಗಿದ್ದಾರೆ. ಕೃಷಿ ಸಚಿವನಾಗಿ ರಿಬ್ಬನ್ ಕತ್ತರಿಸಲು, ಗುದ್ದಲಿ ಪೂಜೆಗೆ ಸೀಮಿತನಾಗಿದ್ದ ನಾನು ಇದೇ ಮೊದಲ ಬಾರಿಗೆ ಉತ್ಪಾದನಾ ಬ್ರಾಂಡ್ ಒಂದನ್ನು ಲೋಕಾರ್ಪಣೆಗೈಯುತ್ತಿರುವುದು ಖುಷಿ ತಂದಿದೆ ಎಂದರು.

ಗೇರುಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಹೆಬ್ರಿ ತಾ.ಪಂ.ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಉದಯ ಎಸ್. ಕೋಟ್ಯಾನ್, ರವಿಪ್ರಕಾಶ್ ಪ್ರಭು, ರೇಷ್ಮಾ ಶೆಟ್ಟಿ, ಜ್ಯೋತಿ ಪೂಜಾರಿ, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಉಮಾಕಾಂತ ರಾನಡೆ, ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಎಂ.ಕೆ. ನಾಯ್ಕ, ಉಡುಪಿ ಜಿಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಉಡುಪಿ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.

ಯೋಗೀಶ್ ಕಿಣಿ ಪ್ರಾರ್ಥನೆ ಹಾಗೂ ರೈತಗೀತೆ ಹಾಡಿದರು. ಉಡುಪಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಕೆಂಪೇಗೌಡ ಸ್ವಾಗತಿಸಿದರು. ಉದಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ನವೀನ್ ಚಂದ್ರ ಜೈನ್ ಪ್ರಸ್ತಾವಿಸಿದರು.

5 ಕ್ವಿಂಟಾಲ್ ಉತ್ಪಾದನೆ:

ತಾಲೂಕಿನಲ್ಲಿ 6,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಸಲಾಗುತ್ತಿದ್ದು, ಅದರಲ್ಲಿ 1,000 ಹೆಕ್ಟೇರ್ ಕಾರ್ಲ ಕಜೆ ಬೆಳೆ ಬೆಳೆಸಲಾಗುತ್ತಿದೆ. ಕಾರ್ಲ ಕಜೆ ಸದ್ಯ 5,000 ಕ್ವಿಂಟಾಲ್ ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುವುದರಿಂದ ಉತ್ಪಾದನೆ ಹೆಚ್ಚಳವಾಗಲಿದೆ. ಸರ್ಕಾರವು ಈ ಯೋಜನೆಗೆ ಕಾನೂನು ಚೌಕಟ್ಟಿನಲ್ಲಿ ಮಾನ್ಯತೆ ಒದಗಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು. ರೈತರು ಬೆಳೆಸುವ ಬೆಳೆಗೆ ಮುದ್ರಾಂಕ ದೊರೆತಾಗ ಸರ್ಕಾರದ ಮಾನ್ಯತೆಯಿಂದ ಕೃಷಿಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗುವ ಮೂಲಕ ಆ ಉತ್ಪನ್ನ ಹೆಚ್ಚು ಪ್ರಸಿದ್ಧಿ ಹೊಂದುವ ಜತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ದೊರಕಲು ಸಾಧ್ಯ. ಮುಂದ್ರಾಕವಿರುವ ಉತ್ಪನ್ನಗಳಿಗೆ ಸರ್ಕಾರದಿಂದ ಮಾನ್ಯತೆ ದೊರೆತಾಗ ಬೆಂಬಲ ಬೆಲೆಗಳ ಜತೆಗೆ ಇತರ ಸವಲತ್ತು ಪಡೆಯಲು ಅನುಕೂಲವಾಗಲಿದೆ ಎಂದರು.

ಅಭಿವೃದ್ಧಿ ಎಂದರೆ ಕೃಷಿ ಚಟುವಟಿಕೆಗಳ ಹೆಚ್ಚಳ ಜತೆ ಆರ್ಥಿಕತೆ ಸುಧಾರಣೆ. ಯುವಪೀಳಿಗೆ ಕೃಷಿಯತ್ತ ತೊಡಗಿಸಿಕೊಂಡಾಗ ಇದು ಸಾಧ್ಯವಾಗುತ್ತದೆ. ಕಾರ್ಕಳವು ಗೇರುಬೀಜ, ಜೇನು ಉತ್ಪನ್ನ, ತೆಂಗಿನಎಣ್ಣೆ ಉತ್ಪಾದನೆಗೆ ಪ್ರಸಿದ್ಧಿ ಹೊಂದಿದೆ. ಇವೆಲ್ಲವೂ ಮುದ್ರಾಂಕ ಪಡೆದಾಗ ಹೆಚ್ಚು ಮೌಲ್ಯ ವೃದ್ಧಿಯಾಗುತ್ತದೆ.

ವಿ.ಸುನೀಲ್ ಕುಮಾರ್, ಕಾರ್ಕಳ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net