

ಆರ್.ಬಿ. ಜಗದೀಶ್ ಕಾರ್ಕಳ
ರಾಜ್ಯದ ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ತನ್ನ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಈ ಮೂಲಕ ಕಾರ್ಕಳವು ದೇಶದ ಗಮನ ಸೆಳೆಯುವ ಎಲ್ಲ ಪ್ರಯತ್ನಗಳು ನಡೆಯಲಿದೆ.
ಡಿ.18ರಂದು ದತ್ತ ಜಯಂತಿ ಹಾಗೂ ಕಾರ್ಕಳ ಮಿಯ್ಯರು ಕಂಬಳ ನಡೆಯಲಿದ್ದು, ಅದೇ ದಿನ ಕಾರ್ಕಳ ಉತ್ಸವಕ್ಕೆ ಚಾಲನೆ ದೊರಕಲಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳು ಅಲ್ಲದೆ ದೇಶ, ವಿದೇಶಗಳಿಂದ ಖ್ಯಾತಿ ಹೊಂದಿರುವ ಕಲಾವಿದರ ತಂಡವು ಪಾಲ್ಗೊಂಡು ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಆ ಮೂಲಕ ಕಲೆ, ಸಂಸ್ಕೃತಿಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ದೊರಕಲಿದೆ.
ಡಿ.19ರಿಂದ 23ರ ತನಕ ಮಂಜುನಾಥ ಪೈ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಡಿ.20ಕ್ಕೆ ಹೆಬ್ರಿ, ಬೆಳ್ಮಣ್, ಬಜಗೋಳಿಯಲ್ಲಿ. ಡಿ.21ಕ್ಕೆ ಅಜೆಕಾರು, ಬೈಲೂರಿನಲ್ಲಿ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ತಂಡಗಳಿಂದ ನಡೆಯಲಿದೆ.
ಮೆರವಣಿಗೆಗೆ ಮುಖ್ಯಮಂತ್ರಿ ಚಾಲನೆ
ಡಿ.24ರಂದು ಕಾರ್ಕಳ ಉತ್ಸವದ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಸ್ತಬ್ಧಚಿತ್ರ, ಡೋಲುಕುಣಿತ, ಚೆಂಡೆ, ಹುಲಿವೇಷ, ವಾದ್ಯ ಪರಿಕರಗಳು ಸೇರಿದಂತೆ ವಿಶಾಲ ಕರ್ನಾಟಕ ಒಳಗೊಂಡಂತೆ ಜಾನಪದ, ವೀರಪುರುಷರು, ವೀರವನಿತೆಯರು, ಕನ್ನಡ ನಾಡಿನ ಇತಿಹಾಸ, ನೆಲ, ಜಲವನ್ನು ಪರಿಚಯಿಸುವ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯವು ಈ ಭವ್ಯಮೆರವಣಿಗೆಯಲ್ಲಿ ಇರಲಿದೆ. ಡಿ.24ರಿಂದ 26ರ ತನಕ ಸ್ವರಾಜ್ಯ ಮೈದಾನದಲ್ಲಿ ಆಹೋರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
10 ಸಾವಿರ ಮಂದಿ ಆಸನ ವ್ಯವಸ್ಥೆ
ಸ್ವರಾಜ್ ಮೈದಾನದಲ್ಲಿ ಬೃಹತ್ ಆಕಾರದ ವೇದಿಕೆ ನಿರ್ಮಾಣಗೊಳ್ಳಲಿದ್ದು, ಡಿ.24ರಿಂದ 26ರ ವರೆಗಿನ ಎಲ್ಲ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮ ನೇರ ವೀಕ್ಷಣೆಗಾಗಿ 10 ಸಾವಿರ ಮಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವರಾಜ್ ಮೈದಾನದ ಒಂದು ಪಾರ್ಶ್ವದಲ್ಲಿ ಆಹಾರ ಮೇಳ, ವಸ್ತುಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.
ಕಂಗೊಳಿಸಲಿದೆ ಕಾರ್ಕಳ
ಅವಿಭಜಿತ ಕಾರ್ಕಳ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಅದಕ್ಕಾಗಿ ಮೈಸೂರು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಮಂಡಳಿಯ ಮೇಲಧಿಕಾರಿಗಳು ಕಾರ್ಕಳಕ್ಕೆ ಈಗಾಗಲೇ ಭೇಟಿ ನೀಡಿ, ಮೈಸೂರು ದಸರಾದ ಮಾದರಿಯಲ್ಲಿ ವಿದ್ಯುತ್ ಅಲಂಕಾರಗೊಳ್ಳಿಸುವುದಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಕಾರ್ಕಳ ಅಗಮಿಸುವ ಎಲ್ಲ ಪ್ರಮುಖ ಪೇಟೆಗಳು, ವೃತ್ತಗಳು, ನಗರದ ಪ್ರಮುಖ ರಸ್ತೆ, ಯಾತ್ರಾಸ್ಥಳಗಳು, ಬಸದಿಗಳು, ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು, ಸೇರಿದಂತೆ, ರಸ್ತೆಗಳಲ್ಲಿ ವಿವಿಧ ವಿನ್ಯಾಸ ವಿದ್ಯುತ್ ದೀಪಾಲಂಕಾರಗೊಳ್ಳಲಿದೆ. ಆ ಮೂಲಕ ಕಾರ್ಕಳ ಹೊಸ ಇತಿಹಾಸ ಬರೆಯಲಿದೆ.