

ಉಡುಪಿ: ಕಾರ್ಕಳದ ಪರಶುರಾಮ ಥೀಂ ಪಾರ್ಕ್, ಪರಶುರಾಮನ ವಿಗ್ರಹ ಸ್ಥಾಪನೆ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾಗಿ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕಳೆದ ಚುನಾವಣೆ ಸಂದರ್ಭ ಗೆಲುವು ಸಾಧಿಸಬೇಕು ಎಂಬ ದುರುದ್ದೇಶದಿಂದ, ಅಂದು ಸಚಿವರಾಗಿದ್ದ ಕಾರ್ಕಳ ಶಾಸಕ ಸುನೀಲ್ಕುಮಾರ್, ತರಾತುರಿಯಲ್ಲಿ ಥೀಂ ಪಾರ್ಕ್ ನಿರ್ಮಿಸಿ ಅವ್ಯವಹಾರ ನಡೆಸಿದ್ದರು ಎಂದರು.
ಥೀಂ ಪಾರ್ಕ್ ಸ್ಥಾಪಿಸಿರುವ ಜಾಗ ಗೋಮಾಳಕ್ಕೆ ಮೀಸಲಿಟ್ಟ ಪ್ರದೇಶ ಎಂದು ಅಧಿಕಾರಿಗಳು ತಿಳಿಸಿದ್ದರೂ, ಸಚಿವ ಸ್ಥಾನದ ಅಧಿಕಾರ ಉಪಯೋಗಿಸಿ ಸುನೀಲ್ ಗೆಲುವು ಸಾಧಿಸಿಲು ಥೀಂ ಪಾರ್ಕನ್ನೇ ಮೆಟ್ಟಿಲು ಮಾಡಿಕೊಂಡರು ಎಂದರು.
ಪರಶುರಾಮನ ವಿಗ್ರಹ ನಾಪತ್ತೆ!
ಥೀಂ ಪಾರ್ಕ್ ಸ್ಥಾಪನೆಗೆ ಅಂದಿನ ಬೊಮ್ಮಾಯಿ ಸರ್ಕಾರ 14 ಕೋಟಿ ರೂ. ಅನುದಾನ ನೀಡಿತ್ತು. ಅದರಲ್ಲಿ 12.5 ಕೋಟಿ ರೂ. ಮಂಜೂರಾಗಿದೆ. ಥೀಂ ಪಾರ್ಕ್ಗಾಗಿ 6.78 ಕೋಟಿ ರೂ. ರ್ಖಚಾಗಿದೆ. ಥೀಂ ಪಾರ್ಕ್ ಅವ್ಯವಹಾರ ವಿರೋಧಿಸಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಯುತ್ತಲೇ ಇದ್ದವು ಎಂದು ಭಂಡಾರಿ ಹೇಳಿದರು. ಸಿಎಂ ಸೂಚನೆಯಂತೆ ಸ್ಥಳ ಪರಿಶೀಲಿಸಲು ತೆರಳಿದ್ದಾಗ ಪಾರ್ಕ್ನಲ್ಲಿದ್ದ ಪರಶುರಾಮನ ವಿಗ್ರಹ ಮುಚ್ಚಿಡಲಾಗಿತ್ತು. ತೆರೆದು ನೋಡಿದಾಗ ವಿಗ್ರಹದ ಸೊಂಟದಿಂದ ಮೇಲಿನ ಭಾಗ ಇರಲಿಲ್ಲ. ಅದನ್ನು ಸರಿಪಡಿಸಲು ತೆಗೆಯಲಾಗಿದೆ ಎಂಬ ಮಾಹಿತಿ ಲಭಿಸಿತು. ಹಾಗಾದರೆ, ಮೂರ್ತಿಯನ್ನು ಯಾರ ಅನುಮತಿಯ ಮೇರೆಗೆ ತೆಗೆದಿದ್ದೀರಿ? ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದೀರಾ? ಎಂದು ಅವರು ಭಂಡಾರಿ ಪ್ರಶ್ನಿಸಿದರು.
ಗುಜರಿ ಭ್ರಷ್ಟಾಚಾರ: ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಈ ಭಾಗದ ರೈತರ ಜೀವನಾಡಿಯಾಗಿತ್ತು. ಕಾರ್ಖಾನೆಯ ಗುಜರಿ ಮಾರಾಟದಲ್ಲೂ ಬಿಜಪಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿದೆ. ಇದನ್ನೂ ತನಿಖೆ ಮಾಡಿ ವರದಿ ನೀಡುವಂತೆ ಸಿಎಂ ಸಕ್ಕರೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಕೊಡವೂರು, ಪ್ರಸಾದ್ರಾಜ್ ಕಾಂಚನ್, ಉದಯಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ, ದೀಪಕ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿದ್ದರು.