

ಕಾರ್ಕಳ: ಕಾರ್ಕಳ ಪುರಸಭೆಯಲ್ಲಿ ತಾರತಮ್ಯ ಧೋರಣೆ ನಿರಂತರವಾಗಿ ನಡೆಯುತ್ತದೆ. ಪ್ರತಿಪಕ್ಷ ಸದಸ್ಯರಿಗೆ ಚಿಕ್ಕಾಸು ಬೆಲೆ ನೀಡದೆ ಆಡಳಿತ ವರ್ಗ ತಮಗೆ ಬೇಕಾದಂತೆ ವರ್ತಿಸುತ್ತಿದೆ. ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ದಾಖಲೆಗೆ ಮಾತ್ರ ಸೀಮಿತವಾಗಿವೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು.
ಪುರಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯ ಶುಭದ ರಾವ್ ಮಾತನಾಡಿ, ದಲಿತ ಸಮುದಾಯದ ಕುಟುಂಬವೊಂದರ ಮನೆ ದುರಸ್ತಿಗೆ ನೆರವು ಕೋರಿ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಕಾರಣ ನೀಡದೆ ಅರ್ಜಿ ತಿರಸ್ಕರಿಸಲಾಗಿದೆ. ಪ್ರಭಾವ ಬೀರಿ ಮತ್ತೊಂದು ಕುಟುಂಬಕ್ಕೆ ಸಹಾಯಧನ ನೀಡುತ್ತಿರುವುದು ಸಮಂಜಸವಲ್ಲ ಎಂದರು.
ಪುರಸಭಾ ಮಾಜಿ ಅಧ್ಯಕ್ಷೆ ಪ್ರತಿಮಾ ಮಾತನಾಡಿ, ಆಡಳಿತ ನಡೆಸುವವರು ತಮಗೆ ಖುಷಿ ಬಂದಂತೆ ವರ್ತಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸುವುದಾದರೆ, ಚುನಾಯಿತ ಪ್ರತಿನಿಧಿಗಳಾದ ನಮ್ಮ ಅಗತ್ಯವಾದರೂ ಏನೆಂದು ಪ್ರಶ್ನಿಸಿದರು. ದಲಿತ ಸಮುದಾಯದ ನಾಲ್ವರು ಕೌನ್ಸಿಲರ್ ಇರುವುದರಿಂದ ಪ್ರತ್ಯೇಕವಾದ ಸಮಿತಿ ರೂಪಿಸಿ ಶ್ರೇಯೋಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಮುದಾಯ ಸಮನ್ವಯಾಧಿಕಾರಿ ಮಲ್ಲಿಕಾ ಮಾತನಾಡಿ, ದಲಿತರ ಮನೆ ದುರಸ್ತಿಗೆ ಹಲವು ಅರ್ಜಿಗಳು ಬಂದಿದ್ದು ಅರ್ಹ ಅರ್ಜಿಗಳನ್ನು ಪರಿಗಣಿಸಿ ಉಳಿದವುಗಳನ್ನು ತಿರಸ್ಕರಿಸಲಾಗಿದೆ ಎಂದರು. ಸರ್ವ ಸದಸ್ಯರ ಸಮ್ಮತಿಯಂತೆ 1 ಅರ್ಜಿಯನ್ನು ಸೇರ್ಪಡೆಗೊಳಿಸಿ 12 ಅರ್ಹ ಫಲಾನುಭವಿಗಳೆಂದು ಪರಿಗಣಿಸಿ ತಲಾ 26 ಸಾವಿರ ರೂ. ಸಹಾಯಧನ ನೀಡಲು ನಿರ್ಧಾರ ಕೈಗೊಂಡ ಬಳಿಕ ಪ್ರತಿಪಕ್ಷ ಸದಸ್ಯರು ಧರಣಿಯನ್ನು ಹಿಂಪಡೆದರು.
ಬೀದಿನಾಯಿಗಳ ಕಾಟ: ನಾಲ್ಕು ತಿಂಗಳಿಂದ ಪ್ರತಿ ಸಭೆಯಲ್ಲೂ ಬೀದಿ ನಾಯಿಗಳ ಕುರಿತು ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಪ್ರಸ್ತಾಪಿಸಿದರು. ನಾಯಿ ಹಿಡಿಯುವವರು ಶಿವಮೊಗ್ಗದಿಂದ ಬರಬೇಕು. ಕೇವಲ 100 ನಾಯಿಗಳನ್ನು ಮಾತ್ರ ಹಿಡಿದು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವೆಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದರು.
ಶಾಲೆ ಬಳಿ ಮರಣ ಚೇಂಬರ್: ಕಾಬೆಟ್ಟು ಸರ್ಕಾರಿ ಶಾಲೆಗೆ ತೆರಳುವ ರಸ್ತೆಯಲ್ಲಿಯೇ ಒಳಚರಂಡಿ ಚೇಂಬರ್ ಇದ್ದು, ಮಳೆಗಾಲದಲ್ಲಿ ಇದರಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಚಿಮ್ಮುತ್ತಿದೆ. ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಓಡಾಡುತ್ತಿದ್ದಾರೆ. ಹಳೆಯದಾಗಿರುವ ಚೇಂಬರ್ ಹಾಗೂ ಮುಚ್ಚಳದಿಂದ ಅಪಾಯ ಎದುರಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷೆ ರಹಮತ್ ಗಮನಕ್ಕೆ ತಂದರು.
ರಸ್ತೆಯೇ ಅಪಾಯ: ಜೋಗಲ್ ಬೆಟ್ಟು ರಸ್ತೆ ಮಳೆಗಾಲದ ಸಂದರ್ಭ ಸಂಚಾರಕ್ಕೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ರಸ್ತೆಯನ್ನು ಎತ್ತರಿಸಿ ಸಂಚಾರಕ್ಕೆ ಅನುವು ಮಾಡುವಂತೆ ವಿನ್ನಬೋಲ್ಡ್ ಮೆಡೋನ್ಸಾ ತಿಳಿಸಿದರು.
ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷೆ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಲಾಪ ಗೌರವಿಸಿ: ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಾಮಾನ್ಯಸಭೆಯ ಕಲಾಪವನ್ನು ಗೌರವಿಸಬೇಕು. ಸದಸ್ಯರು ಕೇಳುವ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಲು ಅಧಿಕಾರಿ ವರ್ಗದವರು ಹೆಣಗಾಡುತ್ತಿರುವುದರಿಂದ ಸಾಮಾನ್ಯ ಸಭೆ ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಅಸಮಾಧಾನ ವ್ಯಕ್ತಪಡಿಸಿದರು.