

ಕಾರ್ಕಳ: ಅನೈತಿಕ ಸಂಬಂಧ ವಿಚಾರದಲ್ಲಿ ಇಬ್ಬರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯೊಂದಿಗೆ ಪರ‌್ಯಾವಸಾನಗೊಂಡಿದೆ. ಮಿಯ್ಯರು ಬೋರ್ಕಟ್ಟೆಯ ನಿವಾಸಿ ಹರೀಶ್ ಪೂಜಾರಿ(38) ಕೊಲೆಗೀಡಾದವರು. ಶಿರ್ವದ ಗುರುವ(52) ಕೊಲೆ ಆರೋಪಿ.
ಮೆಸ್ಕಾಂ ಕಾಮಗಾರಿ ನಡೆಸುವ ಗುತ್ತಿಗೆದಾರರ ಜತೆ ಕೆಲಸ ಮಾಡುತ್ತಿದ್ದ ಹರೀಶ್ ಪೂಜಾರಿ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಗುರುವ ಮಾಳದ ಮುಕ್ಕಾಯಿ ಎಂಬಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದರು. ಆ ಮನೆಯು ರೀಟಾ ಎಂಬುವರ ತಾಯಿಗೆ ಸೇರಿದ್ದಾಗಿದೆ. ರೀಟಾಳೊಂದಿದಿನ ಅನೈತಿಕ ಸಂಬಂಧವೇ ಘಟನೆಗೆ ಕಾರಣವೆಂದು ಪೊಲೀಸರ ತನಿಖೆ ಮೂಲಗಳಿಂದ ತಿಳಿದುಬಂದಿದೆ.
ರೀಟಾ ವಿವಾಹಿತೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪತಿ ಮೂಡುಬಿದರೆ ಸಮೀಪದ ಬೆಳುವಾಯಿಯಲ್ಲಿ ಕೆಲಸ ಮಾಡುತ್ತಿದ್ದರೆ, ರೀಟಾ ತನ್ನ ಇಬ್ಬರು ಮಕ್ಕಳನ್ನು ತವರುಮನೆಯಲ್ಲಿ ಬಿಟ್ಟು, ಸಮೀಪದಲ್ಲಿರುವ ತಾಯಿಗೆ ಸೇರಿದ ಇನ್ನೊಂದು ಮನೆಯಲ್ಲಿ ಇದ್ದರು. ಅದೇ ಮನೆಯಲ್ಲಿ ಹರೀಶ್ ಪೂಜಾರಿಯ ಕೊಲೆ ನಡೆದಿದೆ.
ಭಾನುವಾರ ರಾತ್ರಿ 8 ಗಂಟೆಯ ವೇಳೆ ಹರೀಶ್ ಪೂಜಾರಿ ಹಾಗೂ ಗುರುವ ನಡುವೆ ಜಗಳ ನಡೆದಿದೆ. ಆ ಬಳಿಕ ಊಟ ಮಾಡಿ ಮಲಗಿದ್ದ ಹರೀಶ್ ಪೂಜಾರಿಯ ತಲೆಗೆ ಆರೋಪಿ ಗುರುವ ಕಬ್ಬಿಣದ ರಾಡ್‌ನಿಂದ ಹೊಡೆದು ತಪ್ಪಿಸಿಕೊಂಡಿದ್ದ. ಮಾಹಿತಿ ತಿಳಿದು ಡಿವೈಎಸ್ಪಿ ಭರತ್ ರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡ ಆರೋಪಿ ಗುರುವನನ್ನು ಬಂಧಿಸಲಾಗಿದೆ.