ಕಾರ್ಕಳ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ

court new
Published on

ಕಾರ್ಕಳ: 1898ರಲ್ಲಿ ಆರಂಭಗೊಂಡಿದ್ದ ಕಾರ್ಕಳ ನ್ಯಾಯಾಲಯವು ಹೆಬ್ರಿ ಸೋಮೇಶ್ವರದಿಂದ ಮೂಲ್ಕಿಯ ಪಾವಂಜೆ ತನಕ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು. ಇದೇ ನ್ಯಾಯಾಲಯದಲ್ಲಿ ವೃತ್ತಿ ಆರಂಭಿಸಿದ ಅದೆಷ್ಟೋ ಮಂದಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕ್ಷೇತ್ರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಪೈಕಿ ಕೆ.ಎಸ್.ಹೆಗ್ಡೆ, ವೀರಪ್ಪ ಮೊಯಿಲಿ ಒಳಗೊಂಡಿರುವುದು ಕಾರ್ಕಳಕ್ಕೆ ಹೆಮ್ಮೆ ಎನ್ನಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.

ಕಾರ್ಕಳದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯಗಳ ಸಂಕೀರ್ಣವನ್ನು ಲೋಕಾರ್ಪಣೆಗೈದು ಮಾತನಾಡಿದರು.

ಕಾರ್ಕಳ ನ್ಯಾಯಾಲಯವು ಒಂದು ಫ್ಯಾಕ್ಟರಿ ಇದ್ದಂತೆ, ವಕೀಲರನ್ನು ಸಿದ್ಧಪಡಿಸಿ ಉನ್ನತ ಕ್ಷೇತ್ರಗಳಿಗೆ ಕಳುಹಿಸುವಲ್ಲಿ ಮುಂಚೂಣಿಯಲ್ಲಿ ಇದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬಡವರ ಪಾಲಿಗೆ ನ್ಯಾಯ ದೊರಕಲಿರುವ ಪುಣ್ಯಕ್ಷೇತ್ರವೇ ನ್ಯಾಯಾಲಯ. ಅವಿಭಜಿತ ದಕ್ಷಿಣ ಕನ್ನಡಿಗರು ನ್ಯಾಯಪರ ಕಾನೂನು, ಆಡಳಿತ ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಉಳ್ಳವರು ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ಮಹಾ ವಿಲೇಖನಾಧಿಕಾರಿ ರಾಜೇಂದ್ರ ಬದಾಮಿಕರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ.ಸುನೀಲ್ ಕುಮಾರ್, ಶಿವಮೊಗ್ಗ (ಸಿ ಆ್ಯಂಡ್ ಬಿ.) ಕೇಂದ್ರ ವಲಯ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜು ಬಿ.ಟಿ., ಕಾರ್ಕಳ ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಎನ್. ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಸ್ವಾಗತಿಸಿದರು. ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಪ್ರಸ್ತಾವಿಸಿದರು. ಕಾರ್ಕಳ ವಕೀಲರ ಸಂದ ಅಧ್ಯಕ್ಷ ಸನತ್ ಕುಮಾರ್ ಜೈನ್ ವಂದಿಸಿದರು.

ಜನ್ಮಭೂಮಿಯ ಒಲವು

ಜನ್ಮಭೂಮಿಯ ಬಗ್ಗೆ ಎಲ್ಲಿಲ್ಲದ ಒಲವು ನನ್ನಲ್ಲಿದೆ. ಮಗಳು ತವರಿಗೆ ಬಂದಷ್ಟೇ ಖುಷಿ ನೀಡುತ್ತದೆ ಎಂದು ನ್ಯಾ.ಅಬ್ದುಲ್ ನಜೀರ್ ಹೇಳಿದರು. ಜನ್ಮ ನೀಡಿದ ಭೂಮಿ ಅವಿಭಜಿತ ಕಾರ್ಕಳವಾಗಿದ್ದರೆ, ವಕೀಲನಾಗಿ ಜನ್ಮ ನೀಡಿದ ಭೂಮಿಯೂ ಕಾರ್ಕಳ ಎಂದು ಸ್ಮರಿಸಿದ ಅವರು, ಹುಟ್ಟೂರಿನ ಕುರಿತು ಕೊಂಡಾಡಿ ತುಳು, ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net