ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ

atthur
Published on

ಕಾರ್ಕಳ: ಸತ್ಕಾರ್ಯಗಳಿಲ್ಲದ ದೇವ ವಿಶ್ವಾಸ ನಿರ್ಜೀವ, ನಮ್ಮ ವಿಶ್ವಾಸವನ್ನು ಒಳ್ಳೆಯ ಕಾರ‌್ಯಗಳಿಂದ ಜಗತ್ತಿಗೆ ತೋರ್ಪಡಿಸುವ ಅಗತ್ಯವಿದೆ. ನಮ್ಮಿಂದ ಲೋಕಕ್ಕೆ ಒಳಿತಾದಾಗ ಮಾತ್ರ ನಮ್ಮ ವಿಶ್ವಾಸ ಸಾರ್ಥಕ ಎಂದು ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ಡಾ.ಟಿ. ಅಂತೋಣಿ ಸ್ವಾಮಿ ಹೇಳಿದರು. ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ ಎರಡನೇ ದಿನ ಸೋಮವಾರ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಬೋಂದೆಲ್ ಧರ್ಮಕೇಂದ್ರದ ಧರ್ಮಗುರು ಆಂಡ್ರೂ ಡಿಸೋಜ ಹಾಗೂ ಉಡುಪಿ ಸಮಾಜ ಸೇವಾ ಸಂಸ್ಥೆ ಸಂಪದ ನಿರ್ದೇಶಕ ರೆಜಿನಾಲ್ಡ್ ಪಿಂಟೊ ಬಲಿಪೂಜೆಗಳನ್ನು ನೆರವೇರಿಸಿ ಪ್ರಾರ್ಥಿಸಿದರು. ಪೂಜಾಂತ್ಯದಲ್ಲಿ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿ, ಗುರುಗಳು ಭಕ್ತರ ಶಿರದ ಮೇಲೆ ಹಸ್ತಗಳನ್ನಿಟ್ಟು ಪ್ರಾರ್ಥಿಸಿದರು. ಸೋಮವಾರ ಧರ್ಮಾಧ್ಯಕ್ಷರ ಕನ್ನಡ ಭಾಷೆಯ ಬಲಿಪೂಜೆ ಹಾಗೂ ಅಸ್ವಸ್ಥರಿಗಾಗಿ ಬಲಿಪೂಜೆ ನಡೆಯಿತು. ಧರ್ಮಗುರುಗಳಾದ ಮೂಲ್ಕಿಯ ಇವಾನ್ ಗೋಮ್ಸ್, ಬೆಳ್ತಂಗಡಿಯ ಬೊನವೆಂಚರ್ ನಜ್ರೆತ್ ಹಾಗೂ ಮುಕಮಾರ್‌ನ ಲುವಿಸ್ ಡೆಸಾರವರು ಕೊಂಕಣಿ ಭಾಷೆಯಲ್ಲಿ, ಚಿಕ್ಕಮಗಳೂರಿನ ಧರ್ಮಗುರು ಅನಿಲ್ ಪಾಯ್ಸ ಕನ್ನಡದಲ್ಲಿ ಬಲಿಪೂಜೆ ನೆರವೇರಿಸಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಸಾಮಾಜಿಕ ಸಂಘಟಕ ಉದಯ ಕುಮಾರ್ ಶೆಟ್ಟಿ ಮುನಿಯಾಲು ಕ್ಷೇತ್ರಕ್ಕೆ ಭೇಟಿ ನೀಡಿದರು. ಭಾನುವಾರ ರಾತ್ರಿ ಪುಣ್ಯಕ್ಷೇತ್ರದ ವಠಾರದಲ್ಲಿ ಕಾರ‌್ಯ ನಿರ್ವಹಿಸುತ್ತಿದ ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಹೊರತು ಕ್ಷೇತ್ರದಲ್ಲಿ ಎಲ್ಲ ಕಾರ‌್ಯಗಳು ಸುಸೂತ್ರವಾಗಿ ನಡೆದಿವೆ.

ಅಸ್ವಸ್ಥರಿಗೆ ವಿಶೇಷ ವ್ಯವಸ್ಥೆ: ಅಸ್ವಸ್ಥರಿಗಾಗಿ ಸೋಮವಾರ ನಡೆದ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆಗಳಲ್ಲಿ ಹೆಚ್ಚಿನ ಭಕ್ತರು ಭಾಗವಹಿಸಿದರು. ಅಸ್ವಸ್ಥರನ್ನು ಹೊತ್ತ ವಾಹನಗಳಿಗೆ ಪುಣ್ಯಕ್ಷೇತ್ರದ ವಠಾರದೊಳಕ್ಕೆ ಹೋಗಲು ವಿಶೇಷ ವ್ಯವಸ್ಥೆ ಮಾಡಲಾಯಿತು. ವಾಹನಗಳಿಂದ ಕೆಳಗಿಳಿಯಲು ಸಾಧ್ಯವಾಗದ ಅಸ್ವಸ್ಥರಿಗೆ ಧರ್ಮಗುರುಗಳು ಸ್ಥಳಕ್ಕೇ ಹೋಗಿ ಪಾಪನಿವೇದನೆಯ ಸಂಸ್ಕಾರ ನೀಡಿದರು.

ಇಂದಿನ ಕಾರ್ಯಕ್ರಮ: ಜ.28ರಂದು 11 ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10.30ಕ್ಕೆ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಜೀವರ್ಗೀಸ್ ಮಾರ್ ಮಕಾರಿಯೊಸ್ ಕಲಯಿಲ್ ಅವರಿಂದ ಹಾಗೂ ಸಂಜೆ 6 ಗಂಟೆಗೆ ಶಿವಮೊಗ್ಗದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೊ ಹಬ್ಬದ ಬಲಿಪೂಜೆಗಳನ್ನು ಕನ್ನಡ ಭಾಷೆಯಲ್ಲಿ ನೆರವೇರಿಸಲಿದ್ದಾರೆ. ಬೆಳಗ್ಗೆ 7.30, 9.00, 12, 3.00, 4.30, 8.00, 9.30 ಹಾಗೂ 11 ಗಂಟೆಗೆ ಕೊಂಕಣಿ ಬಲಿಪೂಜೆಗಳು ಹಾಗೂ 1.30 ಮತ್ತು ರಾತ್ರಿ 9.30ಕ್ಕೆ ಕನ್ನಡ ಬಲಿಪೂಜೆಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net