ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ ಸಂಪನ್ನ

13KMD-2
Published on

 ಕೆ.ಎಂ.ದೊಡ್ಡಿ: ಭಕ್ತರ ಹರ್ಷೋದ್ಗಾರ, ಪಟಾಕಿಗಳ ಚಿತ್ತಾರ, ತಮಟೆ ವಾದ್ಯ, ಪೂಜಾ ಕುಣಿತದ ಕಲಾಮೇಳದೊಂದಿಗೆ ಸಮೀಪದ ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ತಾಲೂಕು ಆಡಳಿತದ ನೇತ್ವದಲ್ಲಿ ಜರುಗಿದ ರಥೋತ್ಸವಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ರಥದಲ್ಲಿದ್ದ ಶ್ರೀ ಬಸವೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ರಥ ಎಳೆಯುವುದರ ಮೂಲಕ ಶಾಸಕ ಕದಲೂರು ಉದಯ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿ ನಾಡು ಸಮೃದ್ಧವಾಗಿ ರೈತರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಲಿ ಎಂದು ಬೇಡಿಕೊಂಡರು.

ರಥೋತ್ಸವ ನಡೆಯುವ ಮುನ್ನ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀ ಬಸವೇಶ್ವರ ಬಸಪ್ಪ ಹಾಗೂ ಗ್ರಾಮ ದೇವತೆ ಶ್ರೀ ಪಟ್ಟಲದಮ್ಮ ಸೇರಿದಂತೆ ಇತರೆ ದೇವತೆಗಳ ಮೆರವಣಿಗೆ ಮೂಲಕ ಬಸವೇಶ್ವರ ದೇವರ ವಿಗ್ರಹವನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಯಿತು. ನಂತರ ಸಂಪ್ರದಾಯಿಕ ಪೂಜೆಯೊಂದಿಗೆ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲದೆ, ದೇವರ ಮೂರ್ತಿಗೆ ದೇವಾಲಯದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದರು.

ರಥೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತಾದಿಗಳು ದೇವರನ್ನು ಮನದಲ್ಲಿ ನೆನೆದು, ಹರ್ಷೋದ್ಘಾರಗಳೊಂದಿಗೆ ರಥಕ್ಕೆ ಹಣ್ಣು ಮತ್ತು ದವನ ಎಸೆದು ತಮ್ಮ ಭಕ್ತಿ ಪ್ರದರ್ಶಿಸಿದರು. ಪೂಜಾ ಕುಣಿತ ತಂಡ ತನ್ನ ಕಲಾ ಪ್ರದರ್ಶನದೊಂದಿಗೆ ನೋಡುಗರ ಗಮನ ಸೆಳೆದವು.ರಥೋತ್ಸವಕ್ಕೆ ಅಗತ್ಯವಾದ ತಯಾರಿಯನ್ನು ದೇವೇಗೌಡನದೊಡ್ಡಿ, ಮೆಣಸಗೆರೆ ಗ್ರಾಮದ ಗ್ರಾಮಸ್ಥರು ಮಾಡಿದ್ದರು.

ಸುತ್ತ-ಮುತ್ತಲ ಗ್ರಾಮಗಳಿಂದಷ್ಟೇ ಅಲ್ಲದೆ ನಾನಾ ಜಿಲ್ಲೆಗಳಿಂದಲೂ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ಸಾವಿರಾರು ಭಕ್ತಾಧಿಗಳ ವೇದಘೋಷಗಳ ನಡುವೆ ರಥೋತ್ಸವ ವಿಜೃಂಭಣೆಯಿಂದ ನೆರೆವೇರಿತು. ರಥೋತ್ಸವಕ್ಕೆ ಆಗಮಿಸಿದ್ದ ಚಿಕ್ಕರಸಿನಕೆರೆ ಕಾಲಭೈರವೇಶ್ವರನ ಬಸಪ್ಪ ಹಾಗೂ ಕಾರ್ಕಹಳ್ಳಿ ಬಸವೇಶ್ವರ ಬಸಪ್ಪನಿಗೆ ಹಾಕಲಾಗಿದ್ದ, 500, 200, 100ರ ನೋಟುಗಳೇ ಆಭರಣಗಳಾಗಿತ್ತು. 5 ದಿನ ನಡೆದ ಜಾತ್ರೆಯಲ್ಲಿ ಕಟ್ಟಲಾಗಿದ್ದ ಅಂಗಡಿ-ಮುಂಗಟ್ಟುಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು. ಎತ್ತ ನೋಡಿದರೂ ತಿಂಡಿ, ತಿನಿಸುಗಳು ಮತ್ತು ಮಕ್ಕಳ ಆಟಿಕೆ ಸಾಮಗ್ರಿಗಳ ಅಂಗಡಿಗಳೇ ಕಂಡುಬರುತ್ತಿತ್ತು. ಇಲ್ಲಿಗೆ ಆಗಮಿಸಿದ್ದ ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ನಡೆಯಿತು.

ಈ ಸಂದರ್ಭದಲ್ಲಿ ಗ್ರೇಡ್2 ತಹಸೀಲ್ದಾರ್ ಸೋಮಶೇಖರ್, ಕಂದಾಯ ಅಧಿಕಾರಿ ರವೀಂದ್ರ ಸೇರಿದಂತೆ ಮತ್ತಿತರಿದ್ದರು.

ಬಂದೋಬಸ್ತ್: ಜಾತ್ರಾ ಮಹೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳೂ ನಡೆಯದಂತೆ ಭಾರತೀನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net