ಧರ್ಮ ರಕ್ಷಣೆಯಿಂದ ಸಮಾಜ ಸುರಕ್ಷಿತ

18_HSN_11
Published on

ಆಲೂರು: ಧರ್ಮ ರಕ್ಷಣೆ ಮಾಡಿದರೆ ಮಾತ್ರ ಸಮಾಜ ಸುರಕ್ಷಿತವಾಗಿರುತ್ತದೆ ಎಂದು ಪಂಚಗ್ರಹ ಹಿರೇಮಠದ ಪೀಠಾಧ್ಯಕ್ಷ ಶ್ರೀ ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಭಿಷೇಕದ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಸರಣಿ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಧರ್ಮಸಂರಕ್ಷಣಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಾವೆಲ್ಲರೂ ಧರ್ಮವೇ ಸುಖದ ಮೂಲ ಎಂಬುದನ್ನು ಅರಿತುಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ನಡೆಯಲು ಸಂಕಲ್ಪ ಮಾಡಬೇಕು. ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿಯ ಮೇಲೆ ಭಗವಂತನ ಅನುಗ್ರಹ ಸದಾ ಇರುತ್ತದೆ. ಆದ್ದರಿಂದ ಪ್ರತಿಯೊಂದು ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾಧನೆಗಳಿಗೆ ಸಮುದಾಯ ಮತ್ತು ಸಮಾಜ ಇನ್ನಷ್ಟು ಬೆಂಬಲ ನೀಡಬೇಕು ಎಂದರು.
ಹೊರಗಿನ ಶತ್ರುಗಳಿಗಿಂತ ನಮ್ಮೊಳಗೆ ಇರುವ ಕಾಮ, ಕ್ರೋಧ, ಮೋಹ, ಮದ ಮತ್ಸರ ಎಂಬ ಶತ್ರುಗಳನ್ನು ನಾಶ ಮಾಡಬೇಕು. ಅದಕ್ಕಾಗಿ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು. ಇದೇ ಸಂದರ್ಭದಲ್ಲಿ ಮಠದ ವತಿಯಿಂದ ನೀಡುವ ಗೌರವ ಗುರುರಕ್ಷೆಯನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ವಕೀಲ ಸುರೇಶ್ ರಂಗೇನಹಳ್ಳಿ, ಪತ್ರಕರ್ತ ಸತೀಶ್ ಚಿಕ್ಕಕಣಗಾಲು ಅವರಿಗೆ ನೀಡಿ ಗೌರವಿಸಲಾಯಿತು. ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ಜಯರಾಜ್, ಜಿಲ್ಲಾ ಕಾಫಿ ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕೋಟೆ ಇದ್ದರು. ಸಾಂಪ್ರದಾಯಿಕ ವಸ್ತ್ರ ಧರಿಸಿ ಬಂದ ಭಕ್ತರು: ಶ್ರೀ ಮಠಕ್ಕೆ ಆಗಮಿಸಿದ ಸಕಲ ಭಕ್ತರೂ ಪಂಚೆ, ಶಲ್ಯ ಮತ್ತು ಮಾತೆಯರು ಸೀರೆ ಧರಿಸಿ ಬಂದಿದ್ದರು. ಸಾಂಪ್ರದಾಯಿಕ ವಸ್ತ್ರ ವೈವಿಧ್ಯ ವಿಶೇಷವಾಗಿ ಗಮನ ಸೆಳೆಯಿತು. ಹಲವು ಭಕ್ತರು ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ದಾಸೋಹ ಸೇವೆಗೆ ಸಮರ್ಪಿಸಿದರು. ನಂತರ ಭಕ್ತರಿಗೆ ಅನ್ನ ದಾಸೋಹ ಮಾಡಲಾಯಿತು. ಕಾರ್ಜುವಳ್ಳಿ ಮಠಾಧೀಶರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ವರ್ಧಂತಿ ಉತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ 7ರಿಂದ 11ರ ವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ರುದ್ರ ಸೂಕ್ತ ಪಾರಾಯಣ ಪೂರ್ವಕ ಕುಂಭಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಆರತಿ ಹಮ್ಮಿಕೊಳ್ಳಲಾಗಿದೆ. ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವನದುರ್ಗಾ ಪರಮೇಶ್ವರಿ ಅಮ್ಮನವರಿಗೆ ಶ್ರೀಸೂಕ್ತ ಪಾರಾಯಣ ಪೂರ್ವಕ ಪಂಚ ಸಹಸ್ರ ಅಶೋಕ ಪುಷ್ಪಾರ್ಚನೆ ನೆರವೇರಲಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಅಮೃತ ಸಂಜೀವಿನಿ ಮೃತ್ಯುಂಜಯ ಹೋಮವನ್ನು ಋತ್ವಿಜರು ನಡೆಸಲಿದ್ದಾರೆ. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net