ನಾಯಕರಿಗೆ ‘ಸುವರ್ಣ ಕಿರೀಟ’

VJP_Kirita
Published on

ವಿಜಯಪುರ: ತಮ್ಮ ನೆಚ್ಚಿನ ನಾಯಕರಾದ ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರಿಗೆ ಸುವರ್ಣ ಕಿರೀಟ ತೊಡಿಸುವ ಮೂಲಕ ಕಾರಜೋಳ ಗ್ರಾಮಸ್ಥರು ಅಭಿಮಾನ ಮೆರೆದರು.

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆರೆಗೆ ಬಾಗಿನ ಸಮರ್ಪಣೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಬಬಲೇಶ್ವರ-ಕಾಖಂಡಕಿ- ಕಾರಜೋಳ ರಾಷ್ಟ್ರೀಯ ಹೆದ್ದಾರಿ 218 ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ಚಾಲನೆ ಸಮಾರಂಭದಲ್ಲಿ ತ್ರಿಮೂರ್ತಿಗಳು ಚಿನ್ನದ ಕಿರೀಟ ಧರಿಸಿ ರಾರಾಜಿಸಿದರು.

ಅಭಿವೃದ್ಧಿಯಿಂದ ವಂಚಿತವಾಗಿದ್ದ ಕಾರಜೋಳ ಗ್ರಾಮವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿದ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ತಮ್ಮ ಊರಿನ ಹೆಮ್ಮೆಯ ಪುತ್ರ ಗೋವಿಂದ ಕಾರಜೋಳ ಅವರಿಗೆ ಸುವರ್ಣ ಕಿರೀಟ ತೊಡಿಸುವ ಮೂಲಕ ಕಾರಜೋಳ ಗ್ರಾಮಸ್ಥರು ಅಭಿಮಾನ ಮೆರೆದರು. ಜತೆಗೆ ಗ್ರಾಮದ ಪ್ರಗತಿಗೆ ಕೊಡುಗೆ ನೀಡಿದ ಮಾಜಿ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲರಿಗೂ ಚಿನ್ನದ ಕಿರೀಟ ತೊಡಿಸಿದರು.

ಕಿರೀಟ ಧರಿಸಲು ಮೂವರೂ ಸುತಾರಾಂ ಒಪ್ಪಲಿಲ್ಲ. ಶಿವಾನಂದ ಪಾಟೀಲರಂತೂ ತೀವ್ರವಾಗಿ ಕಡೆಗಣಿಸಿದರು. ಬಳಿಕ ಗ್ರಾಮಸ್ಥರ ಬಲವಂತದ ಮೇರೆಗೆ ಕಿರೀಟ ಧರಿಸಿದರಲ್ಲದೆ ತಮ್ಮ ಅಭಿಮಾನಕ್ಕೆ ಋಣಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net