

ಹಾಸನ: ಅರಸೀಕೆರೆ ನಗರದ ಅಧಿದೇವತೆಗಳಾದ ಶ್ರೀ ಕರಿಯಮ್ಮ ಹಾಗೂ ಮಲ್ಲಿಗೆಮ ್ಮದೇವಿ ರಥೋತ್ಸವ ಗುರುವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ರಥೋತ್ಸವದ ಹಿನ್ನಲೆಯಲ್ಲಿ ಮುಂಜಾನೆಯಿಂದಲೆ ಕರಿಯಮ್ಮ ಮತ್ತು ಮಲಿಗೆಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಬಣ್ಣ ಬಣ್ಣದ ಬಾವುಟ, ಬಗೆ ಬಗೆಯ ಹೂ, ಹಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದ ರಥದಲ್ಲಿ ದೇವರ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿಲಾಯಿತು.
ನೆರೆದಿದ್ದ ಜನಸ್ತೋಮ ಉಘೇ, ಉಘೇ ಎನ್ನುತ್ತಾ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಾಲಯದ ಬಳಿ ಭಕ್ತರಿಗೆ ಸಂಘ ಪರಿವಾರದ ಮುಖಂಡರು ಪಾನಕ-ಫಲಹಾರ, ಮಜ್ಜಿಗೆ ನೀಡಿದರೆ, ದೇವಾಲಯ ಸೇವಾ ಸಮಿತಿವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಬುಧವಾರ ತಡರಾತ್ರಿ ಕರಡೇವು, ಮಂಗಳವಾದ್ಯ, ಚಿಟ್ಟಿಮೇಳದೊಂದಿಗೆ ಗ್ರಾಮದೇವತೆಗಳಾದ ಕರಿಯಮ್ಮ, ಮಲ್ಲಿಗೆಮ್ಮ ದೇವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಗರುಡನಗಿರಿ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಶ್ಯಾನುಭೋಗರ ಬೀದಿ, ವಾಚನಾಲಯ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿತು. ಬಳಿಕ ಬಸವೇಶ್ವರ ವೃತ್ತದ ಮಾರ್ಗವಾಗಿ ಹೊರಟು ದೇವಾಲಯ ತಲುಪಿತು.
ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಜನಸ್ತೋಮ ಸೇರಿತ್ತು. ಚೆಲುವರಾಯ ಹಾಗೂ ಧೂತರಾಯ ಸ್ವಾಮಿಯ ಕುಣಿತ ನೋಡುಗರನ್ನು ರಂಜಿಸಿತು. ಮೇ 3ರಂದು ಶುಕ್ರವಾರ ಸಂಜೆ 5 ಗಂಟೆಗೆ ಉಭಯ ದೇವಿಯರ ಅದ್ದೂರಿ ಆನೆ ಅಂಬಾರಿ ಉತ್ಸವ ನಡೆಯಲಿದೆ.