ಕಾರ್ಗಿಲ್ ವಿಜಯೋತ್ಸವ ರಜತ ಮಹೋತ್ಸವ

New Kargil New
Published on

ಹುಬ್ಬಳ್ಳಿ : ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು, ಭಾರತೀಯ ಸೈನ್ಯ ಗೆಲುವು ಸಾಧಿಸಿದ ದಿನಕ್ಕೆ ಇದೀಗ ರಜತ ಮಹೋತ್ಸವದ ಸಂಭ್ರಮ. ಪ್ರತಿ ವರ್ಷ ಜು.26 ಬಂತೆಂದರೆ ನೆನಪಾಗುವುದು ಕಾರ್ಗಿಲ್ ವಿಜಯ ದಿವಸ್. ಕಾರ್ಗಿಲ್ ವಿಜಯೋತ್ಸವಕ್ಕೆ ಇದೀಗ 25 ವರ್ಷ. ಈ ಹಿನ್ನೆಲೆಯಲ್ಲಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಜುಲೈ 28ರಂದು ಕಾರ್ಗಿಲ್ ವಿಜಯ ದಿವಸ್ ಆಯೋಜಿಸಿದೆ.

ಸ್ವರ್ಣ ಸಮೂಹ ಸಂಸ್ಥೆ ಹಾಗೂ ರೆಡ್ ಎಫ್​ಎಂ ಸಹಯೋಗದೊಂದಿಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರಿನ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಅಂದು ಸಂಜೆ 4 ಗಂಟೆಗೆ ‘ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಧಾರವಾಡ ಜಿಲ್ಲೆಯ ವೀರ ಯೋಧರಿಗೆ ಆತ್ಮೀಯ ಸನ್ಮಾನ’ ಆಯೋಜಿಸಿದೆ.

ದೇಶಭಕ್ತಿಗಳನ್ನು ಹಾಡುವ ಮೂಲಕ ದೇಶವಾಸಿಗಳಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹೆಚ್ಚಿಸುವ ಖ್ಯಾತಿ ಪಡೆದಿರುವ ಕೊಲ್ಲಾಪುರದ ಸುಪ್ರಸಿದ್ಧ ಸ್ವರನಿನಾದ ತಂಡದಿಂದ ‘ಜಾಗೋ ಹಿಂದುಸ್ತಾನಿ’ ಸಂಗೀತ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ. ರಾಷ್ಟ್ರದ ಗೌರವಕ್ಕಾಗಿ ವೀರಮರಣವನ್ನಪ್ಪಿದ ನೂರಾರು ಯೋಧರನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗಿದೆ.

ಸುಮಾರು ಮೂರು ತಿಂಗಳ ಯುದ್ಧದ ನಂತರ 1996ರ ಜುಲೈ 26ರಂದು ಭಾರತೀಯ ಪಡೆಗಳು ಕಾರ್ಗಿಲ್ ವಲಯದಿಂದ ಪಾಕಿಸ್ತಾನಿ ನುಸುಳುಕೋರರನ್ನು ಹೊರಹಾಕಿದರು. ದ್ರಾಸ್, ಕಾರ್ಗಿಲ್, ಬಟಾಲಿಕ್, ಟೈಗರ್ ಹಿಲ್​ಗಳಲ್ಲಿ ನಡೆದ ಹೋರಾಟ, ನಮ್ಮ ಸೈನಿಕರ ಶೌರ್ಯವನ್ನು ಸ್ಮರಿಸುವ ದೇಶಭಕ್ತಿ ಗೀತೆಗಳು ಜಾಗೋ ಹಿಂದುಸ್ತಾನಿ ತಂಡದಿಂದ ಕೇಳಿಬರಲಿವೆ.

ಭಾರತೀಯ ಸೈನ್ಯದ 527 ಹುತಾತ್ಮರು, 1,363 ಗಾಯಾಳು ಸೈನಿಕರ ಶೌರ್ಯ, ಸಾಹಸವನ್ನು ಸ್ಮರಿಸುವ ಈ ದಿನದಂದು ಸಾರ್ವಜನಿಕರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪಾಲ್ಗೊಳ್ಳಲಿ. ಆ ಮೂಲಕ ಕಾರ್ಗಿಲ್ ಯೋಧರಿಗೆ ಗೌರವ ಸಲ್ಲಿಸಲಿ ಎಂಬುದು ಪತ್ರಿಕೆಯ ಕಳಕಳಿ.

=================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net