

ಮಂಡ್ಯ: ಭಾರತ ಹಲವಾರು ಯುದ್ಧಗಳನ್ನು ಎದುರಿಸಿ ಗೆದ್ದಿದೆ. ಆದರೆ ಕಾರ್ಗಿಲ್ ಕದನದ ಗೆಲುವು ನಮ್ಮ ದೇಶದ ಹೆಮ್ಮೆಯ ಪ್ರತೀಕ ಎಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಎ.ಸಿ.ರಮೇಶ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ) ಆವರಣದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಎನ್‌ವೈಕೆ, ರೋಟರಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 24ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಮತ್ತು ನಿವೃತ್ತ ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಗಿಲ್ ಕದನ ಐದಾರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟಗುಡ್ಡಗಳ ಕಠಿಣ ಶೀತ ಪ್ರದೇಶದಲ್ಲಿ ನಡೆದಿದೆ. ಅಪಾರ ಸೈನಿಕರ ತ್ಯಾಗ ಬಲಿದಾನದೊಂದಿಗೆ ಕಾರ್ಗಿಲ್ ಪ್ರದೇಶವನ್ನು ನಮ್ಮ ಸೈನಿಕರು ಗೆದ್ದು ಕೊಡುತ್ತಾರೆ ಎಂದು ನುಡಿದರು.
ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಕಾರ್ಗಿಲ್ ಯುದ್ಧ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಸೈನಿಕರ ಸೇವೆಯನ್ನು ಸ್ಮರಿಸೋಣ ಎಂದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಿ.ಗುರುಲಿಂಗೇಗೌಡ ವಹಿಸಿದ್ದರು. ರೋಟರಿ ಸಂಸ್ಥೆಯ ಜಿಲ್ಲಾ ಸದಸ್ಯ ಶಂಕರ್‌ನಾರಾಯಣಶಾಸ್ತ್ರಿ, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು, ರೋಟರಿ ಕಾರ್ಯದರ್ಶಿ ರಾಜೇಶ್, ಬರ್ನಾಡಪ್ಪ, ಎನ್‌ವೈಕೆ ಕಚೇರಿ ಲೆಕ್ಕಾಧಿಕಾರಿ ರವಿಚಂದ್ರ, ಸ್ವಯಂ ಸೇವಕ ಹರ್ಷ, ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು, ಉಪನ್ಯಾಸಕಿ ಟಿ.ಎನ್.ಮಾಲಿನಿ ಇತರರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕ್ಯಾಪ್ಟನ್ ಚೌಡೇಗೌಡ, ಪಿಳೈ ಗಜೇಂದ್ರ ಮತ್ತು ಜಯರಾಮೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.