

ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ವಿಶ್ವಚೇತನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಶುಕ್ರವಾರ ರಜತ ಮಹೋತ್ಸವ ಆಚರಿಸಲಾಯಿತು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮು ಹೊಂಗಲ ಮಾತನಾಡಿ, ಕಾರ್ಗಿಲ್ ಬರೀ ಭೂಮಿಯಲ್ಲ. ನೂರಾರು ವೀರಯೋಧರು ತಮ್ಮ ರಕ್ತದ ಮೂಲಕ ಭಾರತಮಾತೆಗೆ ಅಭಿಷೇಕ ಮಾಡಿದ ದಿನ. ಶಾಂತಿ ಕದಡಲು ಯತ್ನಿಸಿದವರಿಗೆ ಆಪರೇಷನ್ ವಿಜಯ್ ವಿಶೇಷ ಕಾರ್ಯಾಚರಣೆ ಮೂಲಕ ಭಾರತದ ಎದುರಾಳಿಗಳೊಂದಿಗೆ ನಮ್ಮ ಕೆಚ್ಚೆದೆಯ ವೀರಯೋಧರು ಹೋರಾಡಿ ವಿಜಯಪತಾಕೆ ಹಾರಿಸಿದ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.
ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ವಿಶೇಷ ನೃತ್ಯ ನಾಟಕ ರೂಪಕ ಪ್ರದರ್ಶನ ಜರುಗಿದವು. ಶಿಕ್ಷಕರಾದ ಮಹಾಲಕ್ಷ್ಮೀ ಗವಿ, ಶ್ರೀದೇವಿ ಹೊಂಗಲ, ಪ್ರೇಮಾ ಪತ್ತಾರ, ಶ್ವೇತಾ ವಾಸನ, ರೇಖಾ ಭೂಮಣ್ಣವರ, ತುಳಸಿ ಮೇಟಿ, ಸಿಬ್ಬಂದಿ ಉಪಸ್ಥಿತರಿದ್ದರು.