

ಮಂಡ್ಯ: ಕಾರ್ಗಿಲ್ ಯುದ್ಧ ಸಾಮಾನ್ಯವಲ್ಲ. ಬದಲಿಗೆ ಭಾರತದ ಸ್ವಾಭಿಮಾನದ ಸಂಕೇತವಾಗಿದೆ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.
ತಾಲೂಕಿನ ಕಾಳೇನಹಳ್ಳಿ ಬಳಿಯ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ದೇಶದ ಸೈನಿಕರು ಮಾಡಿದ ತ್ಯಾಗ ಬಲಿದಾನ, ಅವರು ಮಾಡಿದ ಹೋರಾಟ ಎಂದಿಗೂ ಚಿರಸ್ಮರಣೀಯ. ಇಂದು ನಾವು ಅತ್ಯಂತ ಸುರಕ್ಷಿತ ಹಾಗೂ ನೆಮ್ಮದಿಯುತವಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದು ನಮ್ಮ ಸೈನಿಕರಿಂದ ಮಾತ್ರ. ಇಂತಹ ಸೈನಿಕರ ತ್ಯಾಗ ಬಲಿದಾನಗಳನ್ನು ಇಡೀ ದೇಶವೇ ಸ್ಮರಿಸಬೇಕು. ಅವರ ರಾಷ್ಟ್ರ ಪ್ರೇಮ ಹಾಗೂ ಧೈರ್ಯ, ಸಾಹಸವನ್ನು ಯುವಜನರು ಅನುಸರಿಸಬೇಕು ಎಂದು ಕರೆ ನೀಡಿದರು.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಕರ್ನಲ್ ಮನೀಶ್‌ಪ್ರಸಾದ್ ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಎನ್‌ಸಿಸಿ ಘಟಕಗಳನ್ನು ಕಡ್ಡಾಯವಾಗಿ ತೆರೆಯುವ ಮೂಲಕ ಮಕ್ಕಳಲ್ಲಿ ದೇಶ ಭಕ್ತಿಯ ಜತೆಗೆ ಶಿಸ್ತು ಬದ್ಧ ಜೀವನವನ್ನು ರೂಪಿಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಅನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಕ್ಕಿಂತ ದೇಶವೇ ಮುಖ್ಯವಾಗಿದೆ. ಯುವಜನರು ಧಾರ್ಮಿಕ ಸಂಪ್ರದಾಯಗಳಿಗೆ ಮರುಳಾಗದೆ ದೇಶ ಪ್ರೇಮವನ್ನು ನಿತ್ಯ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಟ್ರಸ್ಟಿ ದೇವರಾಜು, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಚಿದಾನಂದ ಪಾಟೀಲ್, ಸಹ ಕಾರ್ಯದರ್ಶಿ ಗಂಗಾಧರ ಆಚಾರ್, ಎನ್‌ಸಿಸಿ ಅಧಿಕಾರಿ ರಾಜು, ಉಪ ಪ್ರಾಂಶುಪಾಲೆ ಮಂಗಳಾ, ಮುಖ್ಯಶಿಕ್ಷಕಿ ತೇಜೇಶ್ವರಿ ಇತರರಿದ್ದರು.
ಇದೇ ವೇಳೆ ಕರ್ನಲ್ ಮನೀಶ್‌ಪ್ರಸಾದ್ ಮತ್ತು ಸುಬೇದಾರ್ ಮೇಜರ್ ಗೋವಿಂದಪ್ಪ ಯುದ್ಧದಲ್ಲಿ ಪಾಲ್ಗೊಂಡ ಅನುಭವ ಹಂಚಿಕೊಂಡರು. ಅನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ರಾಮಲಿಂಗಯ್ಯ ಅವರಿಗೆ ಶಿಕ್ಷಣರತ್ನ ಪ್ರಶಸ್ತಿಯನ್ನು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಪ್ರದಾನ ಮಾಡಿದರು.