

ಮಂಡ್ಯ: ವೀರ ಸೈನಿಕರ ತ್ಯಾಗ ಮತ್ತು ಬಲಿದಾನಗಳ ಪರಿಚಯವಾಗಬೇಕು. ಆದರೆ ತಂತ್ರಜ್ಞಾನದ ಯುಗದಲ್ಲಿ ವೇಗವಾಗಿ ಎಲ್ಲವನ್ನೂ ಪಡೆಯುವ ನಾವು ಅಷ್ಟೇ ವೇಗವಾಗಿ ಮಾನವೀಯತೆಯ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿಷಾದಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಷ್ಟ್ರ ವಿಕಾಸ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಗಿಲ್ ವಿಜಯೋತ್ಸವ ನೆನಪಿಗಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಹಾಗೂ ನೇತ್ರದಾನ ಶಿಬಿರದಲ್ಲಿ ಮಾತನಾಡಿದ ಅವರು, ಸೈನಿಕರು ಧೀರತ್ವ ಮತ್ತು ಮಾತೃತ್ವದ ಪ್ರತೀಕ. ಪ್ರತಿ ಸೈನಿಕರು ನಿಜವಾದ ವಾರಿಯರ್‌ಗಳು. ಇವರು ಗಡಿಯಲ್ಲಿರುವುದರಿಂದ ನಮಗೆ ಆತಂಕವಿಲ್ಲ. ಅವರು ನೋವನ್ನು ಅನುಭವಿಸಿ ನಮಗೆ ಸಂತೋಷವನ್ನು ಕೊಡುತ್ತಾರೆ. ಅವರು ತಮ್ಮ ಜೀವದ ಅಭದ್ರತೆಯಲ್ಲಿ ನಮಗೆ ಭದ್ರತೆ ಒದಗಿಸುತ್ತಾರೆ. ಇಂತಹವರಿಗೆ ಗೌರವ ಸಲ್ಲಿಸಬೇಕು. ಮಕ್ಕಳಲ್ಲಿ ಯುವಜನರಲ್ಲಿ ಧೀರತ್ವ ಮಾತೃತ್ವದ ಗುಣ ಬೆಳೆಸಬೇಕು. ತ್ಯಾಗದ ಮನೋಭಾವ ಎಲ್ಲರಿಗೂ ಕಷ್ಟವಾಗಬಹುದು. ಆದರೆ ಅದು ವೀರ ಸೈನಿಕರಿಗೆ ಮಾತ್ರ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಒಳ್ಳೆಯ ಮೌಲ್ಯ ಬೆಳೆಸುವ ಕೆಲಸವಾಗಬೇಕು ಎಂದರು.
ಪತ್ರಕರ್ತ ಅಜಿತ್ ಹನುಮಕ್ಕನವರ್ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮೇಜರ್ ಅಶ್ವತ್ಥಕುಮಾರ್ ಮಾತನಾಡಿದರು. ರಾಷ್ಟ್ರ ವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಇತರರಿದ್ದರು. ಸಮಾರಂಭದಲ್ಲಿ ಹಲವು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 150 ಜನರು ರಕ್ತದಾನ ಮಾಡಿದರು. ಇದೇ ವೇಳೆ ನೇತ್ರದಾನಕ್ಕೂ ನೋಂದಣಿ ಮಾಡಿಕೊಳ್ಳಲಾಯಿತು.