ಕಾರ್ಗಿಲ್ ವಿಜಯ ದಿವಸ್ ಆಚರಣೆ, ಗುಮ್ಮಟ ನಗರಿಯಲ್ಲಿ ರಾರಾಜಿಸಿದ ರಾಷ್ಟ್ರ ಧ್ವಜ ಮಾಜಿ ಸೈನಿಕರಿಂದ ಬೈಕ್‌ಗಳ ಬೃಹತ್ ಜಾಥಾ, ಮೈನವಿರೇಳಿಸಿದ ಸೈನಿಕರ ಯಶೋಗಾಥೆ

KARGIL VIJAYOTSAVA
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಡಿಸಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸ್ವಾತಂತ್ರ್ಯ ಭಾರತದ ಅವಿಸ್ಮರಣೀಯ ಕಾರ್ಗಿಲ್ ಯುದ್ಧದ ವಿಜಯ ದಿವಸ್ ಹಿನ್ನೆಲೆ ವಿಜಯವಾಣಿ ಹಾಗೂ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿ, ಭಾರತ ಮಾತ್ರೆ ಭಾವಚಿತ್ರದ ಮೆರವಣಿಗೆ, ದೇಶಭಕ್ತಿ ಗೀತೆ ಮತ್ತು ಯುದ್ಧದ ನೃತ್ಯ ರೂಪಕಗಳು ದೇಶಪ್ರೇಮದ ಹೊನಲು ಹರಿಸಿತು.

ಐತಿಹಾಸಿಕ ಗುಮ್ಮಟ ನಗರಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಗ್ಗೆ ತುಂತುರು ಹನಿಗಳ ಮಧ್ಯೆ ಆರಂಭಗೊಂಡ ಬೈಕ್ ರ‌್ಯಾಲಿ ಜನಮನಸೂರೆಗೊಂಡಿತು. ಸೂಟು-ಬೂಟುಧಾರಿಗಳಾಗಿ, ಸೈನ್ಯದ ಸಮವಸ್ತ್ರದೊಂದಿಗೆ ಮಾಜಿ ಸೈನಿಕರು ಬೈಕ್ ಜಾಥಾ ನಡೆಸುತ್ತಿದ್ದರೆ ಯುದ್ಧದ ಸನ್ನಿವೇಶ ಕಣ್ಮುಂದೆ ಕಟ್ಟಿದಂತಾಯಿತು. ಮಾರ್ಗದುದ್ದಕ್ಕೂ ರಾಷ್ಟ್ರಧ್ವಜನಗಳ ಹಾರಾಟ, ಸ್ವಾಗತ ಮತ್ತು ಶುಭಕೋರುವ ಬೃಹತ್ ಕಟೌಟ್‌ಗಳು ರಾಷ್ಟ್ರೀಯತೆಯ ಭಾವ ಸ್ಫುರಿಸುವಂತಾಗಿಸಿತು.

ಬಳಿಕ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲರು, ದೇಶ ಸೇವೆಯೇ ಈಶ ಸೇವೆ. ಜೀವವನ್ನು ರಕ್ಷಿಸುವವನೇ ದೇವರು. ಹೀಗಾಗಿ ದೇಶ ಮತ್ತು ದೇಶದ ಜನರ ಜೀವ ಕಾಪಾಡುವ ಸೈನಿಕರೇ ನಿಜವಾದ ದೇವರು ಎಂದರು.

ಉಕ್ಕಿನ ಮಹಿಳೆ ಇಂದಿರಾಗಾಂಧಿ 1971ರಲ್ಲಿ ನಡೆಸಿದ ಪಾಕಿಸ್ತಾನದೊಂದಿಗಿನ ಯುದ್ಧ, ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ನಡೆದ ಯುದ್ಧ, ಆಪರೇಶನ್ ಸಿಂಧೂರ ಕಾರ್ಯಾಚರಣೆ ಭಾರತದ ಇತಿಹಾಸದ ಮೈಲಿಗಲ್ಲುಗಳು. ಯಾರೇ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಯುದ್ದ ಮಾಡೋದು ಮಾತೃ ಸೈನಿಕರೆ. ಹೀಗಾಗಿ ಸೈನಿಕರ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ಡಾ.ಕೆ. ಆನಂದ ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಸವರಾಜ ಕೌಲಗಿ, ಸೈನಿಕರ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿನಯ ಪಾಟೀಲ ಅವರು ಸೈನಿಕರ ತ್ಯಾಗ-ಬಲಿದಾನ ಸ್ಮರಿಸಿದರು.

ಮಾಜಿ ಸೈನಿಕರ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ, ಸುಬೇದಾರ ರಾಮಪ್ಪ ಎಲ್.ಕೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕರ್ನಲ್ ಫಿರೋಜ್ ಕಾರ್ಲೆಕರ್, ಕರ್ನಲ್ ಜಿ.ಬಿ. ಶಿಂಧೆ, ಸಂಘದ ಗೌರವಾಧ್ಯಕ್ಷ ಎಚ್.ಆರ್. ಮಾಚಪ್ಪನವರ, ಜಿ.ಬಿ. ಶಿಂದೆ, ವಿಜಯವಾಣಿ ಸ್ಥಾನಿಕ ಸಂಪಾದಕರಾದ ಕೆ.ಎನ್. ರಮೇಶ ಮತ್ತಿತರರಿದ್ದರು. ವಿದ್ಯಾಧರ ಪಾಟೀಲ ನಿರೂಪಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net