

ಮೂಡಿಗೆರೆ: ಕಾರ್ಗಿಲ್ ವಿಜಯದಿಂದ ದೇಶದ ಘನತೆ ಹೆಚ್ಚಾಗಿದೆ. ಭಯೋತ್ಪಾದಕರು ದೇಶಕ್ಕೆ ನುಸುಳಲು ಭಯಪಡುವಂತಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪಟ್ಟಣದ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ನಮ್ಮ ಯೋಧರ ನಿರಂತರ ಹೋರಾಟದ ಫಲವಾಗಿ ಭಾರತೀಯರು ರಕ್ಷಣೆ ಪಡೆವ ಜತೆಗೆ ಗೌರವಯುತ ಜೀವನ ನಡೆಸುವಂತಾಗಿದೆ. ಭವ್ಯ ಭಾರತದ ಪರಂಪರೆಗೆ ಭಾರತೀಯ ಸೈನಿಕರು ಮೆರಗು ನೀಡುತ್ತಿದ್ದಾರೆ ಎಂದರು.
ಭಯೋತ್ಪಾದನಾ ದಾಳಿಯಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದಾರೆ. ಅವರನ್ನು ನೆನಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಭೂ ಸೇನೆ, ವಾಯು ಸೇನೆ, ನೌಕಾ ಸೇನೆ ಈ ಮೂರು ಸೇನೆಗಳು ನಿರಂತರ ಎಚ್ಚರವಾಗಿದ್ದರೆ ಮಾತ್ರ ದೇಶದ ಜನ ವಿಶ್ರಾಂತಿ ಪಡೆಯಬಹುದು. ಈ 3ಸೇನೆಯ ಸೈನಿಕರು ದೇಶವನ್ನು ಕಾಪಾಡುತ್ತಿದ್ದಾರೆ. ಸೈನಿಕರ ತ್ಯಾಗ ಮೆಚ್ಚಬೇಕು. ಸೈನಿಕರು ಕ್ಷಣಮಾತ್ರ ಮೈ ಮರೆತರೆ ದೇಶಕ್ಕೆ ಗಂಡಾಂತರ ಎದುರಾಗಲಿದೆ. ಈ ಕಾರಣಕ್ಕಾಗಿ ಸೈನಿಕರು ತಮ್ಮ ಜೀವ ಪಣಕ್ಕಿಟ್ಟು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಎಂ.ಆರ್.ಜಗದೀಶ್, ಧನಿಕ್ ಕೋಡದಿಣ್ಣೆ, ಎಂ.ಸಿ.ಆದರ್ಶ, ಲತಾ ಲಕ್ಷ್ಮಣ್, ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಹಸಿರು ಫೌಂಡೇಷನ್ ತಾಲೂಕು ಅಧ್ಯಕ್ಷ ರತನ್ ಊರುಬಗೆ ಇತರರಿದ್ದರು.