ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯೋತ್ಸವ

maaji sainikara sanga
Published on

ಮಡಿಕೇರಿ: ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.


ಈ ವೇಳೆ ಮಾತನಾಡಿದ ಮೇಜರ್ ಚಿಂಗಪ್ಪ, ಇಂದು ದೇಶಾದ್ಯಂತ ಕಾರ್ಗಿಲ್ ವಿಜಯದ ೨೫ನೇ ವಾರ್ಷಿಕೋತ್ಸವ ಆಚರಿಸಲಾಗಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನ ಇದಾಗಿದೆ. ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ೫೨೭ ಸೈನಿಕರು ಹುತಾತ್ಮರಾಗಿದ್ದು, ವೀರ ಯೋಧರಿಗೆ ಗೌರವ ಸಮರ್ಪಿಸಲಾಗಿದೆ ಎಂದರು.


ಪ್ರತಿ ಶಾಲೆಯಲ್ಲಿ ಕನಿಷ್ಠ ೧ ಗಂಟೆಗಳ ಕಾಲ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸುವಂತಾಗಬೇಕು. ಆ ಮೂಲಕ ಮಕ್ಕಳಿಗೆ ಭಾರತೀಯ ಸೇನೆಯ ಶೌರ್ಯ, ಸಾಹಸ, ತ್ಯಾಗ ಬಲಿದಾನವನ್ನು ಅರ್ಥಮಾಡಿಸಬೇಕು ಎಂದ ಮೇಜರ್ ಚಿಂಗಪ್ಪ, ದೇಶಕ್ಕಾಗಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಿಗೆ ಸರ್ಕಾರದಿಂದ ಸವಲತ್ತು ಸಿಗದಿರುವುದು ಬೇಸರದ ವಿಚಾರ. ಮಾಜಿ ಸೈನಿಕರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕೆಂದು ಅವರು ಹೇಳಿದರು.


ಈ ಸಂದರ್ಭ ಕೊಡಗು ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net