

ಹುಬ್ಬಳ್ಳಿ : ‘ ಮೇರೆ ದೇಶ ಕಿ ಧರತಿ...., ನನ್ನಾ ಮುನ್ನಾ ರಾಹಿ ಹೂ, ದೇಶ ಕಾ ಸಿಪಾಯಿ ಹೂ....ಮೇರಾ ರಂಗ ದೇ ಬಸಂತಿ ಚೋಲಾ....ಏ ದೇಶ ಹೈ ವೀರ ಜವಾನೋಂಕಾ..., ಏ ವತನ್ ಏ ವತನ್..., ಮೇರಾ ಮುಲ್ಕ ಮೇರಾ ದೇಶ ಮೇರಾ ಏ ವತನ್.., ತೇರಿ ಮಿಟ್ಟಿಮೇ ಮಿಲ ಜಾವಾ, ಗುಲ ಬನಕೆ ಮೈ ಖಿಲ್ ಜಾವಾ...’
ದೇಶಭಕ್ತಿಯ ಈ ಗೀತೆಗಳನ್ನು ಕೇಳಿದರೇನೆ ಮನಸ್ಸು ರೋಮಾಂಚನಗೊಳ್ಳುತ್ತದೆ. ಈ ಹಾಡುಗಳು ರಕ್ತದ ಕಣಕಣದಲ್ಲಿ ರಾಷ್ಟ್ರಭಕ್ತಿಯ ಕಿಚ್ಚನ್ನು ಬಡಿದೆಬ್ಬಿಸುತ್ತವೆ. ಇಂತಹ ರಾಷ್ಟ್ರಭಕ್ತಿಗಳನ್ನು ಹಾಡುವಲ್ಲಿ ಪ್ರಸಿದ್ಧಿ ಪಡೆದಿರುವ ಕೊಲ್ಲಾಪುರದ ಜಾಗೋ ಹಿಂದುಸ್ತಾನಿ ಸ್ವರ ನಿನಾದ ತಂಡ ಜುಲೈ 28ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿದೆ.
ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮವನ್ನು ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ವಿಶೇಷವಾಗಿ ಆಚರಿಸುತ್ತಿದೆ. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಜು. 28ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರಿನ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ‘ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ’ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜಾಗೋ ಹಿಂದುಸ್ತಾನಿ ತಂಡದಿಂದ ದೇಶಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಧಾರವಾಡ ಜಿಲ್ಲೆಯ ಯೋಧರಿಗೆ ಆತ್ಮೀಯ ಸನ್ಮಾನ ಏರ್ಪಡಿಸಲಾಗಿದೆ.
ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಘನ ಉಪಸ್ಥಿತಿಯಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಎಂಡಿ ಸಿಎಚ್ ವಿಎಸ್ವಿ ಪ್ರಸಾದ ಅವರು ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದ ಟ್ರಾವೆಲ್ ಪಾರ್ಟನರ್ ವಿಜಯಾನಂದ ಟ್ರಾವೆಲ್ಸ್ ಹಾಗೂ ರೇಡಿಯೋ ಪಾರ್ಟನರ್ ರೆಡ್ ಎಫ್ಎಂ ಆಗಿದೆ.
ರಾಷ್ಟ್ರದ ಗೌರವಕ್ಕಾಗಿ ವೀರಮರಣವನ್ನಪ್ಪಿದ ನೂರಾರು ಯೋಧರನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗಿದೆ.
ಸೈನಿಕರು, ನಿವೃತ್ತ ಸೈನಿಕರು, ಎನ್ಸಿಸಿ, ಎನ್ಎಸ್ಎಸ್ ಕೆಡೆಟ್ಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸಮೇತ ಪಾಲ್ಗೊಂಡು, ರಾಷ್ಟ್ರಭಕ್ತಿ ಸಾರುವ ಈ ಕಾರ್ಯಕ್ರಮಕ್ಕೆ ಮೆರಗು ತರಲಿ.
ಮಾಹಿತಿಗೆ 88844 32301 ಅಥವಾ 88844 32341 ಸಂರ್ಪಸಿ.