ಕಾರ್ಗಿಲ್ ವಿಜಯೋತ್ಸವ ಹೆಮ್ಮೆಯ ದಿನ: ಮಾಜಿ ಸೈನಿಕರ ಸಂಘದ ಸಹ ಕಾರ್ಯದರ್ಶಿ ಪ್ರಕಾಶ್ ಹೇಳಿಕೆ

Kargil Victory Day Celebration Mandya
Published on

ನಾಗಮಂಗಲ: ಕಾರ್ಗಿಲ್ ವಿಜಯೋತ್ಸವ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡುವ ದಿನವಾಗಿದೆ ಎಂದು ಮಾಜಿ ಸೈನಿಕರ ಸಂಘದ ಸಹ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಮತ್ತು ವೀರ ಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸೈನಿಕರು ಪ್ರಾಣದ ಹಂಗು ತೊರೆದು ಶತ್ರು ರಾಷ್ಟ್ರದ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ಜಯವನ್ನು ತಂದುಕೊಟ್ಟ ಐತಿಹಾಸಿಕ ದಿನ ಎಂದು ಸ್ಮರಿಸಿದರು.

ಜು.26ರಂದು ಪಾಕಿಸ್ತಾನದ ವಿರುದ್ಧ ನಮ್ಮ ದೇಶ ಜಯಗಳಿಸಿದ ದಿನ. ಆ ನೆನಪಿಗಾಗಿ ಕಾರ್ಗಿಲ್ ವಿಜಯದ ದಿನವಾಗಿ ನಾವು ಆಚರಿಸುವ ಜತೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರನ್ನು ಕೂಡ ಸ್ಮರಿಸುವ ಮಹತ್ವದ ದಿನ ಇದಾಗಿದೆ. ಕಾರ್ಗಿಲ್‌ನಂತಹ ಎತ್ತರ ಹಾಗೂ ಮೈನಸ್ 13 ಡಿಗ್ರಿ ಕೊರೆಯುವ ಚಳಿಯಲ್ಲಿ ಯುದ್ದ ಮಾಡಿ ಶತ್ರು ಪಡೆಗಳನ್ನು ಹೊಡೆದೊಡಿಸಿ ಯುದ್ದವನ್ನು ನಮ್ಮ ಸೈನಿಕರು ಗೆಲುವ ಮೂಲಕ ಭಾರತಕ್ಕೆ ಕೀರ್ತಿ ತಂದರು ಎಂದರು.

ದೈಹಿಕ ಶಿಕ್ಷಣದ ನಿವೃತ್ತ ಅಧಿಕಾರಿ ಶಿವಣ್ಣಗೌಡ ಮಾತನಾಡಿ, ದೇಶದ ಗಡಿ ಕಾಯುತ್ತಿರುವ ಸೈನಿಕರ ಜತೆಗೆ ಪ್ರಜೆಗಳಾದ ನಾವೆಲ್ಲರೂ ನಿಲ್ಲುಬೇಕು. ಮಾತ್ರವಲ್ಲದೆ ಸೈನಿಕರ ಪರಿಶ್ರಮ ಮತ್ತು ಸಾಹಸವನ್ನು ನಾವು ಸ್ಮರಿಸಿಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಟಿ.ಮರಿಗೌಡ, ಉಪಾಧ್ಯಕ್ಷ ನಾರಾಯಣ್, ಖಜಾಂಚಿ ಗಿರೀಶ್, ಸಂಚಾಲಕ ಎಂ.ಪಿ.ಚಂದ್ರಕುಮಾರ್, ರಘು ಸೇರಿದಂತೆ ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಕುಟುಂಬಸ್ಥರು ಇದ್ದರು.

ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಮಾಜಿ ಸೈನಿಕರ ಸಂಘದ ಸದಸ್ಯರು, ಕುಟುಂಬಸ್ಥರು ಅಮರ್ ಜವಾನ್ ಚಿತ್ರವನ್ನು ತೆರೆದ ವಾಹನದಲ್ಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕರು, ದೇಶಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಟ್ಟಣದ ರೋಟರಿ ಶಾಲೆ, ಮಾದರಿ ಬಾಲಕಿಯರ ಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದರು. ಚಿಣ್ಣರು ಸೈನಿಕರ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net