ಲಿಂಗರಾಜ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

26-Jaggu-6.jpg
Published on

ಬೆಳಗಾವಿ: ಭಾರತ ಈವರೆಗೆ ಯಾವ ದೇಶದ ಮೇಲೆಯೂ ದಾಳಿ ಮಾಡಿಲ್ಲ. ಆದರೆ, ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್ನು ತಿರುಗಿ ನೋಡುವಂತೆ ಪಾಠ ಕಲಿಸಿದೆ ಎಂದು ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಎಚ್.ಎಂ. ಚನ್ನಪ್ಪಗೋಳ ಹೇಳಿದರು.
 ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಘಟಕದಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ 24ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವು ಈವರೆಗೆ ನಮ್ಮ ಮೇಲೆ ದಾಳಿ ಮಾಡಿದವರ ಇತಿಹಾಸವನ್ನು ಓದುತ್ತಾ ಬಂದಿದ್ದೇವೆ. ಹಾಗಲ್ಲ, ನಮ್ಮ ದೇಶದ ವೀರರು ತಮ್ಮ ಪ್ರಾಣದ ಹಂಗು ತೊರೆದು ಭಾರತ ಮಾತೆಯನ್ನು ಸಂರಕ್ಷಿಸಿದ ಪಾಠ ಓದುವ ಕಾಲವಿದು. ಪಾಕಿಸ್ತಾನದ ಸೈನ್ಯಕ್ಕೆ ತಕ್ಕ ಪಾಠ ಕಲಿಸಿ ವಿಜಯ ಪತಾಕೆ ಹಾರಿಸಿದ ಶ್ರಮದ ದಿನವಿದು ಎಂದರು.
 ನಮ್ಮಲ್ಲಿ ದೇಶ ಪ್ರೇಮ, ರಾಷ್ಟ್ರೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕಾದ ಸಂದರ್ಭವಿದು. ಅನೇಕ ವೀರರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಅಂತಹ ಭಾರತೀಯ ಯೋಧರಿಗೆ ನಾವು ನಮನಗಳನ್ನು ಸಲ್ಲಿಸಲೇಬೇಕು ಎಂದರು.
 ಪದವಿಪೂರ್ವ ಪ್ರಾಚಾರ್ಯೆ ಪ್ರೊ. ಗಿರಿಜಾ ಹಿರೇಮಠ ಮಾತನಾಡಿ, ಕಾರ್ಗಿಲ್ ವಿಜಯ ನಮ್ಮ ಯೋಧರ ಪರಾಕ್ರಮಕ್ಕೆ ಸಾಕ್ಷಿ. ಪಾಕ್ ಸೈನಿಕರು ಎತ್ತರವಾದ ಪ್ರದೇಶಗಳಲ್ಲಿ ಅಡಗಿ ವಶಪಡಿಸಿಕೊಂಡಿದ್ದ ನಮ್ಮ ಭೂಮಿಯನ್ನು ಅಹೋರಾತ್ರಿ ಹೋರಾಡಿ ಜಯದ ಧ್ವಜ ಹಾರಿಸಿದ ಯೋಧರ ಪರಾಕ್ರಮಕ್ಕೆ ಬಣ್ಣಿಸಲು ಪದಗಳಿಲ್ಲ. ಅವರ ತ್ಯಾಗ, ಸೇವೆ ಅಮರ ಎಂದರು.
 ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಮಾತನಾಡಿ, ಭಾರತೀಯರ ದೇಶಾಭಿಮಾನ ಅಖಂಡವಾಗಿ ಮೂಡಿನಿಂತಿದೆ. ಅದಕ್ಕೆ ಪಾಕಿಸ್ತಾನದೊಂದಿಗೆ ಮಾಡಿದ ಯುದ್ಧಗಳೇ ಸಾಕ್ಷಿ. ಪ್ರತಿಸಲ ಸೋತರು ವೈರಿ ರಾಷ್ಟ್ರಕ್ಕೆ ಬುದ್ಧಿಬಂದಿಲ್ಲ. ಇಂದು ಭಾರತ ಜಗತ್ತಿನ ಪ್ರಬಲ ಸೈನಿಕ ಶಕ್ತಿ ಹೊಂದಿದೆ. ಆರ್ಥಿಕವಾಗಿ ಸಬಲಗೊಳ್ಳುತ್ತಿದೆ. ಇಂದಿನ ಯುವಜನಾಂಗ ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಸದೃಢವಾಗಿ ಬೆಳೆಯುವ ಮೂಲಕ ದೇಶಕ್ಕೆ ಮೌಲಿಕ ಕೊಡುಗೆ ನೀಡಬೇಕು ಎಂದರು.
 ಎನ್‌ಸಿಸಿ ಕೆಡೆಟ್ ಅಖಿಲಾ ಗಜಾನನ ರಾಮನಕಟ್ಟಿ ನಿರೂಪಿಸಿದರು. ಪ್ರತೀಕ್ಷಾ, ಸಾರಿಕಾ ಪಾಟೀಲ ಪ್ರಾರ್ಥಿಸಿದರು. ಭೂಮಿ ರಾಮಚಂದ್ರ ಪಾಟೀಲ ವಂದಿಸಿದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net