ಜು.26ರಂದು ಅನಿಕೇತನ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ: ಪ್ರಾಂಶುಪಾಲ ಡಾ.ರಾಮಲಿಂಗಯ್ಯ ಮಾಹಿತಿ

Kargil Victory at Aniketan College Mandya
Published on

ಮಂಡ್ಯ: ತಾಲೂಕಿನ ಯಲಿಯೂರು ವೃತ್ತದ ಬಳಿಯ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಜು.26ರಂದು ಕಾರ್ಗಿಲ್ ವಿಜಯ ದಿನದ ರಜತ ಮಹೋತ್ಸವ, ರಕ್ತದಾನ ಶಿಬಿರ, ಪ್ರಶಸ್ತಿ ಪ್ರದಾನ ಹಾಗೂ ಗೌರವ ಸಮರ್ಪಣೆ ಸಮಾರಂಭ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಾಮಲಿಂಗಯ್ಯ ತಿಳಿಸಿದರು.

ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಸಂಸ್ಥೆ ರಾಜ್ಯ ಮಾಧ್ಯಮ ಶಿಕ್ಷಕ ಸಂಘ ಹಾಗೂ ಮೈಸೂರಿನ 14ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಿದೆ. ಅಂದು ಮಧ್ಯಾಹ್ನ 2.30ಕ್ಕೆ ಅನಿಕೇತನ ಕ್ಯಾಂಪಸ್‌ನಲ್ಲಿ ವೇದಿಕೆ ಸಮಾರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದಕ್ಕೂ ಮುನ್ನ ಬೆಳಗ್ಗೆ 11ಕ್ಕೆ ರಕ್ತದಾನ ಶಿಬಿರ ನಡೆಯಲಿದೆ. 100ಕ್ಕೂ ಹೆಚ್ಚು ರಕ್ತದ ಯೂನಿಟ್ ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಅನಿಕೇಷನ್ ಸ್ಕೂಲ್ ಆಫ್ ಎಜುಕೇಷನ್ ಸಂಸ್ಥೆಯು ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಬೆಳೆಸುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಪ್ರತಿ ವರ್ಷ ಪ್ರೌಢಶಾಲಾ ವಿಭಾಗದ ವಿಜ್ಞಾನ ವಸ್ತುಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆ ನಡಸುತ್ತಿದೆ. ಇದೀಗ ಕಾರ್ಗಿಲ್ ವಿಜಯ ದಿನದ ರಜತ ಮಹೋತ್ಸವ ಆಚರಿಸುತ್ತಿದೆ ಎಂದರು.

ಅನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಜಗದೀಶ್ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನ ಭಾಷಣ ಮಾಡುವರು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಸೈನಿಕರಾದ ಆರ್.ಲೋಕೇಶ್, ಸುಕುಮಾರ್ ಅವರನ್ನು ಇದೇ ವೇಳೆ ಗೌರವಿಸಲಾಗುತ್ತದೆ. ಪಾಂಡವಪುರದ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕ ಪಂಚಲಿಂಗೇಗೌಡ ಅವರಿಗೆ ಶಿಕ್ಷಣ ಚೇತನ ಹಾಗೂ ಅತ್ಯುತ್ತಮ ಬೋಧಕ ಬಿ.ಎಂ.ಚಂದ್ರಶೇಖರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಕೆ.ಆರ್.ರಾಜು, ಉಪನ್ಯಾಸಕ ಪುಟ್ಟೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಶಶಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net