ನಾಳೆ ಕಾರ್ಗಿಲ್ ರಜತ ಮಹೋತ್ಸವ ಸಂಭ್ರಮ

Kargil Silver Jubilee celebrations tomorrow
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಅರ್ಜುನ ಕೋರಿ, ಉಪಾಧ್ಯಕ್ಷ ಪ್ರಶಾಂತ ಸಬರದ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಗಸ್ತಿಮಠ, ಮಲ್ಲಪ್ಪ ಕೋಮಾರ, ವಿಠ್ಠಲ ತೆಗ್ಗಿ ಇತರರಿದ್ದರು.
Published on

ಬಾಗಲಕೋಟೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದಿಂದ ಜು.26 ರಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ಭವನದಿಂದ ಬೃಹತ್ ಬೈಕ್ ರ‌್ಯಾಲಿ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ಸಂಚರಿಸಿ, ಡಾ. ಅಂಬೇಡ್ಕರ್ ಭವನಕ್ಕೆ ಆಗಮಿಸಿ ಮುಕ್ತಾಯಗೊಳ್ಳಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 11ಕ್ಕೆ ನವನಗರದ ಡಾ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಗುಳೇದಗುಡ್ಡದ ಇಂಜನವಾರಿ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಚ್.ವೈ. ಮೇಟಿ ಉದ್ಘಾಟಿಸುವರು. ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಎಸ್ಪಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ, ಬಾಗಲಕೋಟೆ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಸಂಜಯ ಕದಂ, ಎಡಿಸಿ ಪರಶುರಾಮ ಶಿನ್ನಾಳಕರ, ಎಸಿ ಸಂತೋಷ ಜಗಲಾಸರ ಉಪಸ್ಥಿತರರಿವರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸಿಪಾಯಿ ರಂಗಪ್ಪ ಆಲೂರ, ಸಿಪಾಯಿ ರಮೇಶ ಹರಿಜನ, ಹವಾಲ್ದಾರ್ ಅರ್ಜುನ ಹೊಸಹಳ್ಳಿ, ನಾಯಕ ಸುಭಾಸ ಗದಗಿನ ಅವರನ್ನು ಸನ್ಮಾನಿಸಲಾಗುವುದು. ಚೋಳಚಗುಡ್ಡದ ಹುತಾತ್ಮ ವೀರರ ಯೋಧರ ಕುಟುಂಬದ ನಿರ್ಮಲಾ ಕುಲಕರ್ಣಿ, ಬೀಳಗಿಯ ಮಯಾದೇವಿ ಪೋತರಾಜ, ಇಳಕಲ್ಲದ ಲಕ್ಷ್ಮೀಬಾಯಿ ಜಾಧವ, ಮಾಚಕನೂರಿನ ರುಕ್ಷ್ಮಿಣಿ ಮಿರ್ಜಿ, ಶಾಂತಾಬಾಯಿ ತೇಲಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ, ಸೇವಾ ನಿವೃತ್ತರಾದ ಪೊಲೀಸ್ ಇಲಾಖೆ, ಸರ್ಕಾರದ ವಿವಿಧ ಇಲಾಖೆ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಹಾಗೂ ಹಿರಿಯ ಮಾಜಿ ಸೈನಿಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಪ್ರಶಾಂತ ಸಬರದ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಗಸ್ತಿಮಠ, ಮಲ್ಲಪ್ಪ ಕೋಮಾರ, ವಿಠ್ಠಲ ತೆಗ್ಗಿ ಇತರರಿದ್ದರು.

ಕೇಂದ್ರಿಯ ವಿದ್ಯಾಲಯವನ್ನು ಪಿಯುಸಿವರೆಗೂ ವಿಸ್ತರಿಸಿ

ಬಾಗಲಕೋಟೆ ನವನಗರದಲ್ಲಿರುವ ಕೇಂದ್ರಿಯ ವಿದ್ಯಾಲಯ ಎಸ್‌ಎಸ್‌ಎಲ್‌ಸಿವರೆಗಿದ್ದು, ಅದನ್ನು ಪಿಯುಸಿವರೆಗೂ ವಿಸ್ತರಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜತೆಗೆ ಬಾಗಲಕೋಟೆಯಿಂದ ದೆಹಲಿಗೆ ನಿತ್ಯ ರೈಲು ಆರಂಭಿಸಬೇಕು. ಮಾಜಿ ಸೈನಿಕರ ಕಲ್ಯಾಣ ಮಂಟಪಕ್ಕೆ ಜಾಗ ಒದಗಿಸುವ ಜತೆಗೆ ಜಿಲ್ಲೆಯಲ್ಲಿ ಒಂದು ಸ್ಫೋಟ್ಸ್ ವಿವಿ ಪ್ರಾರಂಭಿಸಬೇಕೆಂದು ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಅರ್ಜುನ ಕೋರಿ ಸರ್ಕಾರಕ್ಕೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net