

ಬೇಲೂರು : ಗಡಿಯಲ್ಲಿ ಜೀವದ ಹಂಗು ತೊರೆದು ದೇಶ ಸೇವೆ ಮಾಡುತ್ತಿರುವ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸೋಣ ಎಂದು ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಹೇಳಿದರು.
ದೇಶ ಭಕ್ತರ ಬಳಗ, ನಿವೃತ್ತ ಸೈನಿಕರ ಸಂಘದಿಂದ ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
26 ವರ್ಷಗಳ ಹಿಂದೆ ಪಾಕ್ ಸೈನಿಕರು ಮೋಸದಿಂದ ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಅಕ್ರಮಿಸಿದ್ದರು. ಆದರೆ ನಮ್ಮ ಸೈನಿಕರು ಆಪರೇಷನ್ ವಿಜಯ್ ಹೆಸರಲ್ಲಿ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದರು. ಈ ಐತಿಹಾಸಿಕ ದಿನವೇ ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ ಎಂದರು. ಈ ಯುದ್ಧದಲ್ಲಿ ಹುತಾತ್ಮರಾದ ನಮ್ಮ ದೇಶದ 527 ಸೈನಿಕರನ್ನು ಸ್ಮರಿಸುವ ದಿನವಿದು. ದೇಶ ಕಾಯುವ ಸೈನಿಕರೇ ನಮ್ಮ ಆಸ್ತಿ. ಅವರನ್ನು ಗೌರವಿಸಿದರೆ ದೇಶವನ್ನೇ ಗೌರವಿಸಿದಂತಾಗುತ್ತದೆ ಎಂದರು. ಕಾರ್ಗಿಲ್ ಯುದ್ಧದ ಇತಿಹಾಸ ಅರಿತು, ಶಿಕ್ಷಣದೊಂದಿಗೆ ದೇಶ ಭಕ್ತಿಯನ್ನೂ ರೂಢಿಸಿಕೊಳ್ಳಬೇಕು. ನಾಳಿನ ಉತ್ತಮ ಪ್ರಜೆಗಳಾಗಬೇಕು ಎಂದು ಡಾ.ಎಂ.ಎಂ.ರಮೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಕಾರ್ಗಿಲ್ ಯುದ್ಧ ಭಾರತ ದೇಶದ ಇತಿಹಾಸದಲ್ಲಿ ಮರೆಯಲಾಗದ ದಿನ. ನಮ್ಮ ಸೈನಿಕರು ಶತ್ರು ದೇಶದ ವಿರುದ್ಧ ಹಗಲು ರಾತ್ರಿ ಎರಡು ತಿಂಗಳು
ಹೋರಾಡಿ ಶತ್ರುಗಳ ಹೆಡೆಮುರಿ ಕಟ್ಟಿ ಕಾರ್ಗಿಲ್‌ನ್ನು ವಶಕ್ಕೆ ಪಡೆದರು. ಭಾರತೀಯ ಸೈನಿಕರ ತಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸಿದರೂ, 527 ಸೈನಿಕರು ವೀರ ಮರಣವನ್ನಪ್ಪಿದರು. ಪ್ರತಿ ವರ್ಷ ಜು. 26 ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಿ ಹುತಾತ್ಮರಿಗೆ ಗೌರವ ಸೂಚಿಸಲಾಗುತ್ತಿದೆ ಎಂದರು.
ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಧರ್ಮರಾಜು, ಕಾರ್ಯದರ್ಶಿ ವೆಂಕಟೇಶ್, ನಿವೃತ್ತ ಸೈನಿಕ ಶಿವರಾಜು, ಕಸಾಪ ಮಾಜಿ ಅಧ್ಯಕ್ಷ ರಾಜೇಗೌಡ, ದೇಶ ಭಕ್ತರ ಬಳಗದ ಕಾರ್ಯದರ್ಶಿ ಮಹೇಶ್, ನಿರಂಜನ್, ಸುಲೈಮಾನ್ ಇತರರಿದ್ದರು.