ಮಾಜಿ ಸೈನಿಕರನ್ನು ದೈವಸ್ವರೂಪದಲ್ಲಿ ಗೌರವಿಸಬೇಕು

kargil
Published on

ಕುಶಾಲನಗರ;

ದೇಶ ಸೇವೆ ಮಾಡಿ ನಿವೃತ್ತರಾಗಿ ಬರುವ ಸೈನಿಕರನ್ನು ದೈವಸ್ವರೂಪದಲ್ಲಿ ಗೌರವಿಸುವುದು ಎಲ್ಲರ ಕರ್ತವ್ಯ ಆಗಬೇಕು ಎಂದು ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಹೇಳಿದರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಕುಶಾಲನಗರ ತಾಲೂಕು ಮಾಜಿ ಸೈನಿಕರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಮುಳ್ಳುಸೋಗೆ ಮಾಜಿ ಸೈನಿಕರ ಸಂಘದ ಕೆದಂಬಾಡಿ ಸಣ್ಣಪ್ಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.

ಭಾರತದ ಪ್ರತಿ ಕುಟುಂಬದಿAದ ಒಬ್ಬ ಸೈನಿಕ ಸೇನೆಯಲ್ಲಿರಬೇಕಿತ್ತು. ಆಗ ಮಾಜಿ ಸೈನಿಕರಿಗೆ ಅಗೌರವ ತೋರಿಸುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಸೈನಿಕರು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರುತ್ತಾರೆ. ಅಮೂಲ್ಯವಾದ ಯವ್ವನವನ್ನು ದೇಶದ ರಕ್ಷಣೆಗಾಗಿ ಸವೆಸಿರುತ್ತಾರೆ. ಮಕ್ಕಳು, ಕುಟುಂಬದಿAದ ದೂರ ಉಳಿದು ದೇಶಕ್ಕಾಗಿ ಸೇವೆ ಮಾಡಿರುತ್ತಾರೆ. ಇಂಥ ತ್ಯಾಗ ಮಾಡಿದ ಸೈನಿಕರ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸಬೇಕು. ಮಾಜಿ ಸೈನಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುವಂತಾಗಬೇಕು. ಈ ದೇಶದಲ್ಲಿ ಸಾರ್ಥಕ್ಯದ ಮನೋಭಾವ ಇರುವುದು ಯೋಧರಿಗೆ ಮಾತ್ರ. ದೇಶ ಎಂದು ಬಂದಾಗ ದೇಶಪ್ರೇಮವೇ ಮೊದಲಾಗಬೇಕು. ದೇಶ ಪ್ರೇಮ, ದೇಶಾಭಿಮಾನ ಇಲ್ಲದವನು ಭಾರತೀಯ ಆಗಿರಲು ಸಾಧ್ಯವಿಲ್ಲ. ದೇಶಭಕ್ತಿ ಗೀತೆಯ ಪ್ರತಿಯೊಂದು ಶಬ್ಧದ ಅರ್ಥ ಮಕ್ಕಳು ತಿಳಿದುಕೊಳ್ಳಬೇಕು. ದೇಶಾಭಿಮಾನ ಬೆಳೆಸಿಕೊಳ್ಳಬೇಕು.

ಭಾರತ ಯಾವತ್ತೂ ಯಾರ ವಿರುದ್ಧವೂ ತಾನಾಗಿಯೇ ಕದನಕ್ಕೆ ಹೋಗಿಲ್ಲ. ಆದರೆ ತನ್ನನ್ನು ಕೆಣಕಿದವರನ್ನು ಸುಮ್ಮನೆ ಬಿಟ್ಟಿದ್ದೇ ಇಲ್ಲ. ಪಾಕಿಸ್ತಾನ ವಿರುದ್ಧದ ಕದನಗಳಲ್ಲಿ ಇದು ಸಾಬೀತಾಗುತ್ತಲೇ ಬಂದಿದೆ. ಆದರೆ ಪಾಕಿಸ್ತಾನಕ್ಕೆ ಬುದ್ಧಿ ಮಾತ್ರ ಬರುವುದಿಲ್ಲ. ಪಾಕಿಸ್ತಾನ ಎಂದಿಗೂ ಬದಲಾಗುವುದಿಲ್ಲ. ಜಗತ್ತಿನಲ್ಲಿ ಯಾವ ದೇಶವನ್ನು ಬೇಕಾದರೂ ನಂಬಬಹುದು. ಆದರೆ ಪಾಕಿಸ್ತಾನವನ್ನು ನಂಬಲು ಆಗುವುದಿಲ್ಲ. ತಿದ್ದಿಕೊಳ್ಳಲು ಸಾಕಷ್ಟು ಅವಕಾಶ ಕೊಟ್ಟರೂ ತನ್ನ ಚಾಳಿ ಬಿಟ್ಟಿಲ್ಲ ಎಂದರು.

ಕುಶಾಲನಗರ ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಸುಬೇದಾರ್ ಮೇಜರ್ ಸುಳ್ಯಕೋಡಿ ಆರ್. ಮಾದಪ್ಪ ಕಾರ್ಗಿಲ್ ಯುದ್ಧ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. 75 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧ ಪಾಕಿಸ್ತಾನಕ್ಕೆ ಸರಿಯಾದ ಪಾಠವನ್ನೇ ಕಲಿಸಿತು. ಯುದ್ಧದಲ್ಲಿ ಮಡಿದ ಸೈನಿಕರನ್ನು ಪಾಕಿಸ್ತಾನ ತನ್ನವರೆಂದು ಒಪ್ಪಿಕೊಳ್ಳಲೇ ಇಲ್ಲ. ಕಾರ್ಗಿಲ್ ಯುದ್ಧದ ನಂತರ ಹುತಾತ್ಮ ಯೋಧರ ಮೃತದೇಹ ತವರಿಗೆ ಕಳುಹಿಸುವ ವ್ಯವಸ್ಥೆ ಆಯಿತು. ಇದಕ್ಕೂ ಮೊದಲು ಸೈನಿಕನ ವೀರಮರಣದ ವಿಷಯ ಮಾತ್ರ ಕುಟುಂಬಕ್ಕೆ ತಲುಪುತಿತ್ತು. ಪಾರ್ಥಿವ ಶರೀರ ಸಿಗುತ್ತಿರಲಿಲ್ಲ. ಈ ವ್ಯವಸ್ಥೆ ಮಾಡಿದ್ದಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೀಯರು ಆಗುತ್ತಾರೆ ಎಂದರಲ್ಲದೆ ಈಚಿನ ದಿನಗಳಲ್ಲಿ ಮಾಜಿ ಸೈನಿಕರಿಗೆ ಬೆಲೆ ಸಿಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರ ಕೆಲಸಗಳು ಆಗುವುದಿಲ್ಲ ಎಂದು ವಿಷಾಧಿಸಿದರು.

ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೆರಾ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ಎನ್ನುವುದು ದೇಶ ರಕ್ಷಣೆಗೋಸ್ಕರ ದುಡಿದ ಯೋಧರಿಗೆ ನಮನ ಸಲ್ಲಿಸುವ ಅವಕಾಶ. ದೇಶಕ್ಕೆ ಯೋಧರನ್ನು ನೀಡಿದ ಕುಟುಂಬಕ್ಕೆ ಸಾಂತ್ವನ ಹೇಳುವ ದಿನವೂ ಹೌದು. ಇಂಥ ಕಾರ್ಯಕ್ರಮಗಳ ಮೂಲಕ ಪುಟ್ಟ ಮಕ್ಕಳಿಗೆ ಸಮಾಜದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ ವಿಜಯೋತ್ಸವದ ಹಿಂದಿನ ತ್ಯಾಗ ನೆನೆಯುವಂತಾಗಬೇಕು. ಹುತಾತ್ಮರಿಗೆ ಗೌರವ ಸಲ್ಲಿಸಬೇಕು. ಸೈನಿಕರ ಸೇವೆ ಸ್ಮರಣಿಯವಾಗಿದ್ದು ಸದಾ ಅವರ ಜತೆ ಕೃತಜ್ಞತೆಯಿಂದ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೌ. ಕ್ಯಾಪ್ಟನ್ ದೇವಜನ ಕೆ. ಚಿಣ್ಣಪ್ಪ ಮಾತನಾಡಿ ಸೇನಾ ಬದುಕಿನಲ್ಲಿ ಬಂಕರ್‌ಗಳ ಮಹತ್ವ, ಸೇನೆಯಲ್ಲಿ ಸೈನಿಕರ ಜೀವನ, ಕಾರ್ಗಿಲ್ ಯುದ್ಧ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊAಡರು.

ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಸ್ಕೌಟ್ ಮತ್ತು ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಗೈಡ್ಸ್ ಸಹಾಯಕ ಆಯುಕ್ತೆ ಸುಲೋಚನಾ, ದಮಯಂತಿ, ಕುಶಾಲನಗರ ತಾಲೂಕು ಮಾಜಿ ಸೈನಿಕರ ಸಂಘದ ಕೋಶಾಧಿಕಾರಿ ಹವಾಲ್ದಾರ್ ನಡುವೆಟ್ಟಿರ ಎಸ್. ನರೇಶ್, ನಾಪೋಕ್ಲು ಜೂ. ಕಾಲೇಜು ಉಪನ್ಯಾಸಕಿ ಕೆ.ಬಿ. ಉಷಾರಾಣಿ, ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್ ಇದ್ದರು.

ರಂಗ ಕಲಾವಿದ ಭರಮಣ್ಣ ಬೆಟಗೇರಿ ದೇಶಭಕ್ತಿ ಪ್ರಸ್ತುತಪಡಿಸಿದರು. ಕುಶಾಲನಗರದ ಜ್ಞಾನಗಂಗಾ ವಿದ್ಯಾಸಂಸ್ಥೆ, ಮುಳ್ಳುಸೋಗೆ ಸಮಾಪ್ರಾ ಶಾಲೆ ಹಾಗೂ ಕೂಡುಮಂಗಳೂರು ಸಮಾಪ್ರಾ ಶಾಲೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ವೈವಿಧ್ಯಮಯ ದೇಶ ಭಕ್ತಿಗೀತೆ ಗಾಯನ ನಡೆಯಿತು.

ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ 11 ಮಾಜಿ ಯೋಧರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸುಬೇದಾರ್ ಮೇಜರ್ ಸುಳ್ಯಕೋಡಿ ಆರ್. ಮಾದಪ್ಪ, ಹವಾಲ್ದಾರ್ ಪಿ.ಎ. ಮಹಮ್ಮದ್ ನಬಿ,

ಸುಬೇದಾರ್ ಮೇಜರ್ ಮಕ್ಕಾಟಿರ ಡಿ. ಮುದ್ದಪ್ಪ, ಹವಾಲ್ದಾರ್ ನಡುವೆಟ್ಟಿರ ನರೇಶ್ ಕುಮಾರ್, ಬಿ.ಟಿ. ರಮೇಶ್, ಸುಬೇದಾರ್ ಮೇಜರ್ ಎ.ಪಿ. ಸುಬ್ಬಯ್ಯ, ಗೌ. ಕ್ಯಾಪ್ಟನ್ ದೇವಜನ ಕೆ. ಚಿಣ್ಣಪ್ಪ, ಬಿ.ಆರ್. ಸೋಮಪ್ಪ, ಅಲ್ಬರ್ಟ್ ಗಾನ್‌ಸೆಲ್ವಾಸ್, ಸುಬೇದಾದರ್ ಮೇಜರ್ ಬಿ.ಪಿ. ಅರವಿಂದ ಬಾಬು, ಎನ್.ಎಂ. ಕಾವೇರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net