

ಮಂಡ್ಯ: ಕಳೆದ ವರ್ಷ ಲಕ್ಷಾಂತರ ರೂ ಬೆಲೆ ಬಾಳುವ ಬೆಳೆ ನಾಶಕ್ಕೆ ಕಾರಣವಾಗಿದ್ದ ಹಾಗೂ ಜನ, ಜಾನುವಾರು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದ ಕಾರೇಕಟ್ಟೆ ಗ್ರಾಮದ ಹೊರವಲಯದಲ್ಲಿ ಸ್ಥಾಪಿಸಿದ್ದ ಕೆಮಿಕಲ್ ಕಾರ್ಖಾನೆ ಸ್ಥಗಿತಗೊಂಡಿದೆ.
ಶಾಸಕ ರವಿಕುಮಾರ ಗಣಿಗ ನೇತೃತ್ವದಲ್ಲಿ ಕಾರ್ಖಾನೆ ಆವರಣದಲ್ಲಿ ಆಯೋಜಿಸಿದ ಸಭೆಯಲ್ಲಿ ಜನರು ಹಾಗೂ ಕಾರ್ಖಾನೆಯವರ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಕಾರ್ಖಾನೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದಕ್ಕೆ ಶಾಸಕರು ಸ್ಪಂದಿಸಿದರು. ಅಂತಿಮವಾಗಿ ಕಾರ್ಖಾನೆ ವ್ಯವಸ್ಥಾಪಕರು ಘಟಕ ಸ್ಥಗಿತಗೊಳಿಸುವುದಾಗಿ ಬೇಬಿ ಗ್ರಾಮ ಪಂಚಾಯಿತಿಗೆ ಪತ್ರ ಕೊಟ್ಟು ಸಮಸ್ಯೆಗೆ ಇತಿಶ್ರೀ ಹಾಡಿದರು.
ಏನಿದು ಕಾರ್ಖಾನೆ ವಿವಾದ?: ಬಸರಾಳು ಸಮೀಪದ ಕಾರೇಕಟ್ಟೆ ಗ್ರಾಮದ ಹೊರವಲಯದಲ್ಲಿ ಬೆಂಗಳೂರು ಮೂಲದವರು ಕೆಮಿಕಲ್ ಘಟಕ ಪ್ರಾರಂಭಿಸಿದ್ದರು. ಈ ನಡುವೆ ಅಂದರೆ 2022 ಜ.15ರಂದು ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ನೂರಾರೂ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೆಂಗು ಸೇರಿದಂತೆ ತರಕಾರಿ ಬೆಳೆ ನಾಶವಾಗಿದ್ದವು. ಇದಲ್ಲದೆ ಸುತ್ತಮುತ್ತಲ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಾರಂಭಿಸಿತು. ಆ ಸಮಯದಲ್ಲಿ ಜನರ ಭಾರೀ ಆಕ್ರೋಶವನ್ನು ಎದುರಿಸಬೇಕಾಯಿತು. ಅಂತೆಯೇ ಕಾರ್ಖಾನೆಗೆ ತಾತ್ಕಾಲಿಕವಾಗಿ ಬೀಗ ಮುದ್ರೆ ಹಾಕಲಾಗಿತ್ತು.
ಸುಮಾರು ತಿಂಗಳ ಬಾಗಿಲು ಮುಚ್ಚಲಾಗಿದ್ದ ಕಾರ್ಖಾನೆಯನ್ನು ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಪುನರಾಂಭ ಮಾಡಲಾಗಿತ್ತು. ಇದಕ್ಕೆಂದು ಆಡಳಿತ ಮಂಡಳಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಆದರೆ ಮತ್ತೆ ಸಮಸ್ಯೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ಶಾಸಕ ರವಿಕುಮಾರ ಸಭೆ ಆಯೋಜಿಸಿದ್ದರು. ಮಾತ್ರವಲ್ಲದೆ ಜನರ ಪರ ನಿಂತು ಸಮಸ್ಯೆಗೆ ಕಾರಣವಾಗಿದ್ದ ಕಾರ್ಖಾನೆಯನ್ನು ಮುಚ್ಚಿಸುವಂತೆ ಸೂಚನೆ ನೀಡಿದರು. ಈ ಮೂಲಕ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಸೇರಿದಂತೆ ಪರಿಸರ ಮಾಲಿನ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಇದ್ದರು.
ಕರ್ಕಶ ಶಬ್ಧ, ಆರೋಗ್ಯಹಾಳು: ಕಾರ್ಖಾನೆ ಆರಂಭ ಖಂಡಿಸಿ ಮಾಯಣ್ಣನಕೊಪ್ಪಲು, ಬಾಳೆನಹಳ್ಳಿ, ಬಿದರಕಟ್ಟೆ, ಕಾರೇಕಟ್ಟೆ, ಬೇಬಿ, ತರಣಿಗೆರೆ, ಮಾಡವೀರನಹಳ್ಳಿ, ಶಿವಪುರ, ಕೊತ್ತಗೆರೆ, ಚೌಕನಹಳ್ಳಿ, ಕರಿಮಾಯನಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಇನ್ನು ಶಾಸಕ ರವಿಕುಮಾರ ಸಭೆ ಆರಂಭಿಸುತ್ತಿದ್ದಂತೆ ಮಹಿಳೆಯರು ಕಾರ್ಖಾನೆಯಿಂದಾಗುತ್ತಿರುವ ಸಮಸ್ಯೆಯನ್ನು ಅನಾವರಣಗೊಳಿಸಿದರು. ಪ್ರಮುಖವಾಗಿ ಕರ್ಕಶ ಶಬ್ದ ಬರುತ್ತಿದೆ. ಹೆಚ್ಚಿನ ಹೊಗೆ ಬರುತ್ತಿದ್ದು, ಮಕ್ಕಳಿಗೆ ಕೆಮ್ಮುಕಾಣಿಸಿಕೊಂಡಿದೆ. ಮಾತ್ರವಲ್ಲದೆ ಮೈಚರ್ಮದಲ್ಲಿ ತುರಿಕೆ ಆಗುತ್ತಿದೆ. ಹಿಂದೆ ವಿಷಾನಿಲ ಸೋರಿಕೆಯಿಂದಾಗಿ ಮರಗಳು ಹಾಳಾಗಿದ್ದವು. ಜಮೀನಿನಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಜನರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಕಾರ್ಖಾನೆ ಪ್ರಾರಂಭಿಸಬಾರದು. ಒಂದು ವೇಳೆ ಕೆಮಿಕಲ್ ಬಿಟ್ಟು ಜನರಿಗೆ ಅನುಕೂಲವಾಗುವಂತಹ ಹಾಗೂ ಜನ, ಜಾನುವಾರು, ಬೆಳೆಗಳಿಗೆ ಹಾನಿಯಾಗದಂತಹ ಯಾವುದೇ ಕಾರ್ಖಾನೆ ಪ್ರಾರಂಭಿಸಿದರೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬೇಬಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಚಿಕ್ಕಬೋರೇಗೌಡ, ಸದಸ್ಯ ಚಿಕ್ಕಣ್ಣ, ಮುಖಂಡರಾದ ಕಂಬದಹಳ್ಳಿ ಪುಟ್ಟಸ್ವಾಮಿ, ಕೆಂಚನಹಳ್ಳಿ ಪುಟ್ಟಸ್ವಾಮಿ, ಕೊಡಿಕೊಪ್ಪಲು ನಾಗೇಶ್, ಚಂದ್ರು ಗರುಡನಹಳ್ಳಿ, ಮಾಯಣ್ಣನಕೊಪ್ಪಲು ಕುಳ್ಳೇಗೌಡ ಸೇರಿದಂತೆ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಇನ್ನು ಪ್ರತಿಭಟನೆ ಹಾಗೂ ಸಭೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಮಹೇಶ್, ಬಸರಾಳು ಠಾಣೆಯ ಪಿಎಸ್‌ಐ ಶೇಷಾದ್ರಿ ಕುಮಾರ್ ಇದ್ದರು.