ಕರೆಕಾನಹಳ್ಳಿ ಕೆರೆ ಸಂರಕ್ಷಣೆಗೆ ಆಗ್ರಹ: ಗ್ರಾಮದಿಂದ ಹರಪನಹಳ್ಳಿವರೆಗೆ ಪಾದಯಾತ್ರೆ

2009 Karekanahalli to Harapanahalli Hiking
ಕರೆಕಾನಹಳ್ಳಿಯಿಂದ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.
Published on

ಹರಪನಹಳ್ಳಿ: ಕರೆಕಾನಹಳ್ಳಿ ಕೆರೆ ಅತಿಕ್ರಮಣ ತೆರವುಗೊಳಿಸಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪಾದಯಾತ್ರೆ ಮೂಲಕ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ಎಂ.ಎಲ್.ನಂದೀಶ್‌ಗೆ ಮನವಿ ಸಲ್ಲಿಸಲಾಯಿತು.

ಕರೆಕಾನಹಳ್ಳಿ ಗ್ರಾಮದಿಂದ ಗ್ರಾಮಸ್ಥರೊಂದಿಗೆ ಭಾನುವಾರ ಆರಂಭಿಸಿದ ಪಾದಯಾತ್ರೆ ಹುಲಿಕಟ್ಟೆ ಕ್ರಾಸ್, ಉದ್ಗಟ್ಟಿ ಕ್ರಾಸ್ ಮೂಲಕ ತೊಗರಿಕಟ್ಟೆ, ನಾರಾಯಣಪುರ, ಯಲ್ಲಾಪುರದ ಮಾರ್ಗವಾಗಿ ಹರಪನಹಳ್ಳಿಗೆ ಆಗಮಿಸಿ ಹಿರೇಕೆರಿ ವೃತ್ತದಿಂದ ತಾಲೂಕು ಕಚೇರಿ ತಲುಪಿತು. ಕೆಪಿಸಿಸಿ ವಕ್ತಾರೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ಕರೆಕಾನಹಳ್ಳಿಯ ಕೆರೆಯನ್ನು ಕೆಲವರು ಅತಿಕ್ರಮಣ ಮಾಡಿ ಬಿತ್ತನೆ ಮಾಡಿದ್ದಾರೆ. ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿ ಖಾತೆಗೆ ಬದಲಾವಣೆ ಮಾಡಿಕೊಡಲಾಗಿದೆ. ಒತ್ತುವರಿ ಮಾಡಿದ ಪ್ರದೇಶವನ್ನು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಮಳೆಯನ್ನೇ ಆಶ್ರಯಿಸಿರುವ ತಾಲೂಕಿನಲ್ಲಿ ಜೀವನ ನಡೆಸುವುದೆ ಕಷ್ಟ. ರೈತ ಕುಟುಂಬಗಳು ಕೆರೆಯನ್ನೆ ಆಶ್ರಯಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಕೆರೆಯಂಗಳವನ್ನು ಒತ್ತುವರಿ ಮಾಡಿಕೊಂಡವರಿಂದ ವಶಕ್ಕೆ ಪಡೆದು ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಕೆ.ಸಿದ್ದಲಿಂಗನಗೌಡ, ದಾದಾಪೀರ್, ಹೂಮಾಲಿಬಾಯಿ, ನಾಗರಾಜ್ ನಾಯ್ಕ, ರಮೇಶ್, ತುಮನಪ್ಪ, ಅಂಜಿನಪ್ಪ, ಮಲ್ಲೇಶ್, ಲಾಲು ನಾಯ್ಕ, ಧರ್ಮನಾಯ್ಕ, ಸೀತ್ಯಾನಾಯ್ಕ, ಯೋಗೇಂದ್ರ, ಮಂಜುನಾಥ್, ಸಂತೋಷ್, ಪ್ರಕಾಶ್, ಚಂದ್ರಪ್ಪ, ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net