

ಬಾಗಲಕೋಟೆ: ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರೇ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಬಾಗಲಕೋಟೆ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನವನಗರದ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2014-15ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಬಾಗಲಕೋಟೆಗೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದರಾದರೂ ಅಧಿಕಾರ ಮುಕ್ತಾಯದವರೆಗೂ ಬಿಡಿಗಾಸು ಅನುದಾನ ನೀಡಲಿಲ್ಲ. ನಂತರ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಸಹ ಅದೇ ನಿರ್ಲಕ್ಷೃವನ್ನು ತೋರಿಸಿದವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಬಾಗಲಕೋಟೆ ಮೆಡಿಕಲ್ ಕಾಲೇಜ್‌ಗೆ ಸರ್ಕಾರ ಅನುದಾನ ನೀಡದ ಬಗ್ಗೆ ಅನೇಕ ಸಲ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಮುಖ್ಯವಾಗಿ ಚುನಾವಣೆಯಲ್ಲಿ ಬಾಗಲಕೋಟೆ ಪ್ರಚಾರದ ವೇಳೆ ಇದನ್ನು ಪ್ರಸ್ತಾಪಿಸಿದ್ದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಲೇಜ್ ಆರಂಭಕ್ಕೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹೀಗಿದ್ದಾಗ್ಯೂ ಮೊನ್ನೆಯ ಬಜೆಟ್‌ನಲ್ಲಿ ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಪ್ರಸ್ತಾಪ ಮಾಡಲಿಲ್ಲ, ಅನುದಾನವನ್ನೂ ನೀಡಿಲ್ಲ. ಇದು ಅವರ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜ್ ಬಗ್ಗೆ ಹೊಂದಿರುವ ನಿರ್ಲಕ್ಷೃವನ್ನು ಎತ್ತಿ ತೋರಿಸುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಾಗಲಕೋಟೆ ಮೆಡಿಕಲ್ ಕಾಲೇಜ್ ಆರಂಭಿಸುವಂತೆ ಕರವೇ ಕಳೆದ ಮೂರ‌್ನಾಲ್ಕು ವರ್ಷಗಳಿಂದ ವಿವಿಧ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದೆ. ಈ ಸರ್ಕಾರವಾದರೂ ಅನುದಾನವನ್ನು ಕೊಡುತ್ತದೆ ಎನ್ನುವ ಅಪಾರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇದು ಈ ಭಾಗದ ಜನರಿಗೆ ಸರ್ಕಾರ ಮಾಡಿರುವ ಮೋಸವಾಗಿದೆ. ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಾನಾ ರೂಪದಲ್ಲಿ ನಡೆಯುತ್ತಲೇ ಇರುತ್ತದೆ. ಸಿದ್ದರಾಮಯ್ಯ ಅವರು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ್ ಧರ್ಮಂತಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಬೆಟಗೇರಿ, ರಾಜೇಶ್ವರಿ ಹಿರೇಮಠ, ಬಸವರಾಜ್ ಅಂಬಿಗೇರ, ಅಶೋಕ ಪೂಜಾರಿ, ರಾಚಪ್ಪ ಸನದಿ, ಶಿವಾನಂದ ಲೆಂಕಣ್ಣವರ, ನಾಗರತ್ನಾ ಮೂಲಿಮನಿ, ಬಸೀರ್ ಜಮಾದಾರ, ಹುಚ್ಚಪ್ಪ ಯಡಳ್ಳಿ, ಲೋಹಿತ್ ಬಾರಕೇರಿ ಮತ್ತಿತರರು ಇದ್ದರು.