ಆಂಗ್ಲ ನಾಮಫಲಕ ತೆರವುಗೊಳಿಸಲು ಆಗ್ರಹ

dj dvg karave
Published on

ದಾವಣಗೆರೆ: ನಗರದ ಪಾಲಿಕೆ ವ್ಯಾಪ್ತಿಯಲ್ಲಿನ ಆಂಗ್ಲ ಫಲಕಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಹೇಳಿದರು.

ಈ ಹಿಂದೆ ಹಲವಾರು ಬಾರಿ ಅನ್ಯಭಾಷೆಯ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಮತ್ತು ಜಾಹೀರಾತು ಫಲಕಗಳನ್ನು ಕಿತ್ತುಹಾಕಿ ಮೂಲಕ ವೇದಿಕೆ ಜಾಗೃತಿ ಮೂಡಿಸಿತ್ತು ಎಂದರು.

ನಗರದಲ್ಲಿ ಕೆಲವರು ಕಾಟಾಚಾರದ ಕನ್ನಡಿಗರಿದ್ದಾರೆ. ಅಂತಹವರು ನಾಮ ಫಲಕಗಳಲ್ಲಿ ದೊಡ್ಡದಾಗಿ ಆಂಗ್ಲ ಅಕ್ಷರ ಹಾಗೂ ಚಿಕ್ಕದಾಗಿ ಕನ್ನಡ ಬರೆಸಿಕೊಂಡಿದ್ದಾರೆ.

ಇದಕ್ಕೆ ಪಾಲಿಕೆ ಅನುಮತಿ ನೀಡುವುದು ಖಂಡನೀಯ. ಇದು ಕನ್ನಡಕ್ಕೆ ಮಾಡುವ ದೊಡ್ಡ ಅವಮಾನ ಎಂದು ತಿಳಿಸಿದರು.

ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವ ಮೂಲಕ ಕರವೇ ಹೋರಾಟ ನಡೆಸಿತ್ತು. ಆಗ ಎಚ್ಚೆತ್ತುಕೊಂಡಿದ್ದ ಪಾಲಿಕೆ ಕ್ರಮ ತೆಗೆದುಕೊಂಡಿತ್ತು.

ಈಗ ಮತ್ತೆ ಅನ್ಯ ಭಾಷೆಯ ಫಲಕಗಳು ರಾರಾಜಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.

ನಾಮಫಲಕಗಳಲ್ಲಿ ಕನ್ನಡ ಅಕ್ಷರ ದೊಡ್ಡದಾಗಿರಬೇಕು ಎಂಬುದು ರಾಜ್ಯ ಸರ್ಕಾರದ ಆದೇಶವಾಗಿದೆ. ಆದ್ರೂ ಇದು ಪಾಲನೆಯಾಗುತ್ತಿಲ್ಲ.

ನಗರದ ಪ್ರಮುಖ ಬೀದಿಗಳಲ್ಲಿ ಆಂಗ್ಲ ನಾಮಫಲಕಗಳು ಅದರಲ್ಲೂ ಶಿಕ್ಷಣ ಸಂಸ್ಥೆಗಳು ಮತ್ತು ಪೆಟ್ರೋಲ್ ಬಂಕ್‌ಗಳ ಫಲಕಗಳು ಹೆಚ್ಚಾಗಿವೆ ಎಂದರು.

ಪಾಲಿಕೆ ಆಯುಕ್ತರು ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಸರ್ವೇ ಮಾಡಿಸಿ, ಇವುಗಳನ್ನು ತೆರವುಗೊಳಿಸಬೇಕು. ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಕರವೇ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net