

ಬಳ್ಳಾರಿ : ಬೆಂಗಳೂರಿನಲ್ಲಿ ಅನ್ಯ ಭಾಷೆ ನಾಮಫಲಕ ತೆರವುಗೊಳಿಸಿದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಡಿ.ಕಗ್ಗಲ್ ಶಂಕರ್ ಮಾತನಾಡಿ, ನಾಮಫಲಕಗಳು, ಜಾಹೀರಾತು ಫಲಕಗಳು, ಪೆಟ್ರೋಲ್ ಬಂಕ್, ಐಟಿಬಿಟಿ ಕಂಪನಿಯ ನಾಮಫಲಕಗಳು ಕನ್ನಡದಲ್ಲಿ ಶೇ.60 ರಷ್ಟು ಇರಬೇಕೆಂದು ಸರ್ಕಾರ ಆದೇಶ ಮಾಡಿದೆ. ಆದರೆ ಎಲ್ಲವೂ ಅನ್ಯ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. ರಾಜ್ಯ ಸರ್ಕಾರ ಮಾಡಬೇಕಾದ ಅನ್ಯಭಾಷೆ ನಾಮಫಲಕ ತೆರವು ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ 53 ಸಂಗಡಿಗರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಕಾವಲು ಸಮಿತಿ ಸಂಪೂರ್ಣ ನಿಷ್ಕ್ರೀಯಗೊಂಡಿದೆ. ಕನ್ನಡದ ಪರವಾಗಿ ಒಂದು ಕೆಲಸ ಮಾಡುತ್ತಿಲ್ಲ. ಇಂಥ ನಿಗಮಗಳನ್ನ ವಿಸರ್ಜಿಸಬೇಕೆಂದು ಆಗ್ರಹಿಸಿದರು.
ಮಹಾರಾಷ್ಟ್ರದಲ್ಲಿ ಅವರ ಸ್ಥಳಿಯ ಮರಾಠಿ ಹೋರಾಟಗಾರರಿಗೆ ಸರ್ಕಾರವೇ ಅನುದಾನ ನೀಡಿ ಸಂಪೂರ್ಣ ಸಹಕಾರ ನೀಡುತ್ತದೆ. ಅದೇ ರೀತಿ ತಮಿಳುನಾಡಲ್ಲಿ ತಮಿಳಿಗರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರಿಗೆ ಕೇಸುಗಳು ಹಾಕುವ ಮೂಲಕ ಜೈಲಿಗೆ ಕಳಿಸಲಾಗುತ್ತದೆ ಆಕ್ರೋಶ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿರುದ್ರಪ್ಪ, ಮುಖಂಡರಾದ ಕಿಶೋರ್‌ಕುಮಾರ್, ಸಿದ್ಮಲ್ ಮಂಜುನಾಥ, ಶಬರಿ ರವಿ, ಹುಬ್ಬಳ್ಳಿರಾಜು, ಅನಂದಗೌಡ ತಗ್ಗಿನಬೂದಿಹಾಳ್, ದೇವೇಶ್ ಹಿರೇಮಠ್, ಗಿರಿಬಾಬು, ಬಸವನಗೌಡ, ಕುಡತಿನಿ ಬಾವಿ ಶಿವಕುಮಾರ್, ಮೋಕಾ ಪೊಂಪನಗೌಡ, ಬೆಳಗಲ್ಲು ಕೃಷ್ಣ, ಶಂಕರಬಂಡೆ ರಾಜೇಶ್, ಗೆಣಿಕೆಹಾಳ್ ವಿರೇಶ್, ಮಂಜುನಾಯ್ಕ, ದಿವಾಕರ್, ಸಿರಿಗೇರಿ ವಿರುಪಾಕ್ಷಿ, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್ ಮುಂತಾದವರು ಭಾಗವಹಿಸಿದ್ದರು.