ದ್ವಿಭಾಷಾ ಶಿಕ್ಷಣ ನೀತಿ ಜಾರಿಯಾಗಲಿ: ನಗರದಲ್ಲಿ ಕರವೇ ಪ್ರತಿಭಟನೆ

Karave protest Mandya
Published on

ಮಂಡ್ಯ: ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣದಿಂದ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ(ನಾರಾಯಣಗೌಡ) ಬಣದ ಕಾರ್ಯಕರ್ತರು ಘೋಷಣೆ ಕೂಗಿದರು. ಅಂತೆಯೇ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆ ಕಡ್ಡಾಯಗೊಳಿಸಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿ ಅನುಷ್ಠಾನಗೊಳಿಸಿ, ಇಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಆಂಗ್ಲ ಶಿಕ್ಷಣ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ತ್ರಿಭಾಷಾ ನೀತಿಯಿಂದ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ. ಇದು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಒಂದು ಭಾಗವಾಗಿದೆ. ತ್ರಿಭಾಷಾ ನೀತಿಯಿಂದಾಗಿ ನಮ್ಮ ಮಕ್ಕಳು ಹೆಚ್ಚುವರಿಯಾಗಿ ಹಿಂದಿ ಭಾಷೆಯನ್ನು ಕಲಿಯಬೇಕಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ದ್ವಿಭಾಷಾ ನೀತಿ ಅನುಸರಿಸುತ್ತಿವೆ. ನಮ್ಮದಲ್ಲದ ಭಾಷೆ ಏಕೆ ಕಡ್ಡಾಯವಾಗಿ ಕಲಿಯಬೇಕು?. ಯಾರದ್ದೋ ಹುನ್ನಾರಕ್ಕೆ ನಾವೇಕೆ ಬಲಿಯಾಗಬೇಕು ಎಂದು ಪ್ರಶ್ನಿಸಿದರು.

ತಮಿಳುನಾಡು 1968ರಲ್ಲೇ ತ್ರಿಭಾಷಾ ನೀತಿ ತಿರಸ್ಕರಿಸಿ, ದ್ವಿಭಾಷಾ ನೀತಿ ಅಳವಡಿಸಿ ಕೊಂಡಿದೆ.ಬಿಜೆಪಿ ನೇತೃತ್ವದ ಸರ್ಕಾರ ಇರುವ ಮಹಾರಾಷ್ಟ್ರ ಕೂಡ ದ್ವಿಭಾಷಾ ನೀತಿ ಜಾರಿಗೆ ಮುಂದಾಗಿದೆ.ಈ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಒಳಗೊಂಡ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 1.24 ಲಕ್ಷ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣ ರಾಗಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಮಿತಿ ಸದಸ್ಯ ಮ.ಸೋ.ಚಿದಂಬರ್, ಜಿಲ್ಲಾ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸುಜಾತಾ ಕೃಷ್ಣ, ಮಹಿಳಾ ಅಧ್ಯಕ್ಷೆ ಭಾರತಿ, ಮಂಡ್ಯ ತಾಲೂಕು ಅಧ್ಯಕ್ಷ ತೇಜುಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ರಾಮಚಂದ್ರೇಗೌಡ, ಕಾಂತರಾಜು, ಎಂ.ಪಿ.ಸ್ವಾಮಿ, ಎಸ್.ಅಶೋಕ್, ಗಿರಿಕುಮಾರ್, ಸುನೀಲ್ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net