ಹಿಂದಿ ಕಡ್ಡಾಯ ಕೈಬಿಡುವಂತೆ ಆಗ್ರಹ: ಕರವೇ ಕಾರ್ಯಕರ್ತರ ಪ್ರತಿಭಟನೆ

Karave Protest mandya
Published on

ಮಂಡ್ಯ: ರಾಜ್ಯ ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕೈಬಿಡುವಂತೆ ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ರವಾನಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸ್ವೀಕರಿಸಿದರು. ರಾಜ್ಯದಲ್ಲಿರುವ ಕೇಂದ್ರೀಯ ಸದನ ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಸಿ ಸೇರಿದಂತೆ ನವೋದಯ, ಕಿತ್ತೂರರಾಣಿ ಚೆನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಹ 1 ರಿಂದ 10ನೇ ತರಗತಿವರೆಗೆ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಲಿಸಬೇಕು ಎಂದು ಆಗ್ರಹಿಸಿದರು.

1968ರಲ್ಲಿ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ನಡೆದ ಭಾಷಾ ಒಪ್ಪಂದದ ಪ್ರಕಾರ, ರಾಜ್ಯಸರ್ಕಾರವು ತ್ರಿಭಾಷಾ ನೀತಿಯನ್ನು ಈ ದಿನದವರೆಗೂ ಅನುಮೋದಿಸಲ್ಪಟ್ಟಿಲ್ಲವಾದರೂ, ಅನಾವಶ್ಯಕ ಹಿಂದಿ ಹೇರಿಕೆ ಮಾಡುತ್ತಿರುವ ಕಾರಣವೇನು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ಹಿಂದಿ ಹೇರಿಕೆ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು.

ಹಿಂದಿ ಭಾಷೆಯ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಇದರಿಂದ ಉಳಿದ ವಿಷಯಗಳಲ್ಲಿ ಏಕಾಗ್ರತೆ ಮೂಡದೆ ನಾಡಿನ ಪ್ರತಿಭಾವಂತ ಮಕ್ಕಳು ಕಡಿಮೆ ಅಂಕಗಳಿಗೆ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಒಕ್ಕೂಟ ಸರ್ಕಾರದ ಉದ್ಯೋಗಗಳಿಂದ ವಂಚಿತರಾಗುವುದಲ್ಲದೇ, ರಾಜ್ಯದ ಪ್ರತಿಷ್ಠಿತ ಕಂಪನಿಗಳ ಉದ್ಯೋಗಗಳು ಪರ ರಾಜ್ಯದವರ ಪಾಲಾಗಿವೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಐಐಟಿಗಳಂತ ಪ್ರತಿಷ್ಠಿತ ಉನ್ನತ ವ್ಯಾಸಂಗಕ್ಕೆ ತೆರಳಲು ನಾಡಿನ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರೆಯ ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ನೀತಿಯ ಪಠ್ಯಕ್ರಮವನ್ನು ರಾಜ್ಯದ ಶಿಕ್ಷಣ ಕ್ರಮದಲ್ಲಿ 11 ದಿನಗಳ ಗಡುವಿನಲ್ಲಿ ಜಾರಿಗೊಳಿಸಬೇಕು. ಮೊದಲ ಹಂತದ 440 ಹಾಗೂ ಎರಡನೇ ಹಂತದಲ್ಲಿ 937 ಉರ್ದು ಮಾಧ್ಯಮ ಶಾಲೆಗಳನ್ನೂ, ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಾಡು ಮಾಡುತ್ತಿರುವುದು ಸರಿಯಲ್ಲ. ಆದರೆ ಸದರಿ ಈ ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವ ಸುತ್ತೊಲೆಯನ್ನು ಈ ಕೂಡಲೇ ತುರ್ತು ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುದ್ದೇಗೌಡ, ಪ್ರಜ್ವಲ್, ಸಿ.ಮನೋಹರ್, ಪ್ರಕಾಶ್, ಸರ್ವೇೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net