ನೂತನ ತಾಲೂಕು ಕೇಂದ್ರ ಅಭಿವೃದ್ಧಿಪಡಿಸಿ

6kmr1
ಕಮಲನಗರ ತಾಲೂಕು ಅಭಿವೃದ್ಧಿಪಡಿಸಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಸೇರಿ ನೂತನ ತಾಲೂಕಿನಲ್ಲಿರಬೇಕಾದ ಎಲ್ಲ ಕಚೇರಿಗಳು ಕಾರ್ಯಾರಂಭ ಮಾಡುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿದರು.
Published on

ಕಮಲನಗರ: ಕಮಲನಗರ ತಾಲೂಕು ಕೇಂದ್ರವಾಗಿ ಸುಮಾರು ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಅನೇಕ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಶೀಘ್ರದಲ್ಲಿ ಎಲ್ಲ ಇಲಾಖೆಗಳ ಕಚೇರಿಗಳು ಆರಂಭಿಸಬೇಕು. ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡು ನೂತನ ತಾಲೂಕು ಕೇಂದ್ರ ಅಭಿವೃದ್ಧಿಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ವೇದಿಕೆ ತಾಲೂಕು ಅಧ್ಯಕ್ಷ ಸುಭಾಷ ಗಾಯಕವಾಡ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿಗೆ ಸಲ್ಲಿಸಿತು.

ಸಾಕಷ್ಟು ವರ್ಷಗಳಿಂದ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅದಲ್ಲದೇ ಸದ್ಯ ಇರುವ ಕೆಲ ಇಲಾಖೆಗಳ ಕಚೇರಿಗಳು ಸ್ವಂತ ಕಟ್ಟಡ ಇಲ್ಲದೆ ಸರ್ಕಾರಿ ಶಾಲೆಗಳ ಕೋಣೆಗಳಲ್ಲಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಮಲನಗರ ತಾಲೂಕು ಕೇಂದ್ರವಾದರೂ ಔರಾದ್ ಪಟ್ಟಣಕ್ಕೆ ಜನರ ಅಲೆದಾಟ ತಪ್ಪಿಲ್ಲ. ಇನ್ನೂ ಅನೇಕ ಇಲಾಖೆಯ ಕಚೇರಿಗಳು ಪ್ರಾರಂಭವಾಗಿಲ್ಲ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ, ಶೀಘ್ರದಲ್ಲಿ ಎಲ್ಲ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ ಕಮಲನಗರ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಔರಾದ್ ತಾಲೂಕು ಅಧ್ಯಕ್ಷ ಅನೀಲ ಹೇಡೆ, ಸುಭಾಷ ಮಿರ್ಚೆ, ಕಮಲನಗರ ವಲಯ ಅಧ್ಯಕ್ಷ ಆನಂದ ಬಿರಾದಾರ, ವಿನಾಯಕ ರೆಡ್ಡಿ, ಜಮೀರ್ ಪಟೇಲ್, ಪ್ರಭು ಯಾಕತಪುರ, ಅಮಿತ್ ಶಿವಪೂಜೆ, ರಾಜು ಮುಧಾಳೆ, ಪ್ರಶಾಂತ ಖಾನಾಪುರೆ, ರಾಮೇಶ್ವರ ಶಿವಣಕರ, ಆಯೂಬ್ ಖುರೇಶಿ, ಮೊಹಮ್ಮದ್ ಪಾಷಾ, ರಾಜಕುಮಾರ ಗಾಯಕವಾಡ, ಸಾಯಿನಾಥ ಕಾಂಬಳೆ, ಮಲ್ಲಪ್ಪ ಬಿರಾದಾರ, ಅಜಯ ಸೂರ್ಯವಂಶಿ, ಮಂಜುನಾಥ ಸ್ವಾಮಿ ಇತರರಿದ್ದರು.

ಪ್ರತಿಭಟನಾ ರ‍್ಯಾಲಿ : ಪಟ್ಟಣದ ಅಲ್ಲಮಪ್ರಭು ವೃತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸೇರಿಕೊಂಡು ಸೋನಾಳ ಮುಖ್ಯರಸ್ತೆ ಮಾರ್ಗವಾಗಿ ಪೊಲೀಸ್ ಠಾಣೆ, ಅತಿಥಿ ಗೃಹ, ಡಾ.ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನದಿಂದ ಪ್ರತಿಭಟನಾ ರ‍್ಯಾಲಿ ತಹಸೀಲ್ ಕಚೇರಿಗೆ ತಲುಪಿತು. ಪ್ರತಿಭನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net